ಚಂದೌಲಿ (ಉತ್ತರ ಪ್ರದೇಶ): ದಕ್ಷಿಣ ಭಾರತದಿಂದ ಕಾಶಿ ಪ್ರವಾಸಕ್ಕೆ ಬಂದಿದ್ದ ಸುಮಾರು 21 ಮಂದಿ ಪ್ರಯಾಣಿಕರು ತಾವು ಪ್ರಯಾಣಿಸಬೇಕಿದ್ದ ರೈಲು ತಪ್ಪಿದ್ದರಿಂದ ಉತ್ತರದ ಪ್ರದೇಶದ ಚಂದೌಲಿಯ ರೈಲ್ವೆ ನಿಲ್ದಾಣದಲ್ಲಿ ಕೋಲಾಹಲ ಉಂಟಾದ ಘಟನೆ ನಡೆದಿದೆ. ಸಾಕಷ್ಟು ಜನಸಂದಣಿಯಿಂದಾಗಿ ರಿಸರ್ವೇಶನ್ ಹೊಂದಿದ್ದರೂ ಕೂಡ ಈ ಪ್ರಯಾಣಿಕರಿಗೆ ರೈಲು ಹತ್ತಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.
ಇಲ್ಲಿನ ಪಂಡಿತ್ ದೀನದಯಾಳ್ ರೈಲ್ವೆ ಜಂಕ್ಷನ್ಗೆ ಸಂಘಮಿತ್ರ ಎಕ್ಸ್‌ಪ್ರೆಸ್ ರೈಲು ಸೋಮವಾರ ರಾತ್ರಿ 11 ಗಂಟೆಗೆ ನಿಲ್ದಾಣಕ್ಕೆ ಬರಬೇಕಿತ್ತು. ಆದರೆ, ಗಂಟೆಗಳ ಕಾಲ ತಡವಾಗಿ ಎಂದರೆ ಮರು ದಿನ ಮಧ್ಯಾಹ್ನ 2 ಗಂಟೆಗೆ ರೈಲು ನಿಲ್ದಾಣಕ್ಕೆ ತಲುಪಿದೆ. ಇದೇ ರೈಲಿಗೆ ಆರು ಪ್ರಯಾಣಿಕರು ಬೆಂಗಳೂರಿಗೆ ಮತ್ತು 15 ಪ್ರಯಾಣಿಕರು ವಿಜಯವಾಡಕ್ಕೆ ಹೋಗಬೇಕಿತ್ತು. ಇದರಲ್ಲಿ ಬಹುತೇಕ ಮಹಿಳೆಯರೇ ಇದ್ದರು. ಇವರೆಲ್ಲರೂ ಮುಂಗಡವಾಗಿಯೇ ತಮ್ಮ ಟಿಕೆಟ್ಗಳನ್ನು ಬುಕ್ ಮಾಡಿಸಿಕೊಂಡಿದ್ದರು.
ಆದರೆ, ವಿಪರೀತ ಜನಸಂದಣಿಯಿಂದಾಗಿ ಈ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗಿಲ್ಲ. ರೈಲ್ವೆ ನಿಲ್ದಾಣಕ್ಕೆ ರೈಲು ಬರಬೇಕಾದ ಹೊತ್ತಲ್ಲೇ ಬೋಗಿಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಇದರಿಂದ ಬಾಗಿಲು ತೆರೆದು ಪ್ರಯಾಣಿಕರು ಏರಲು ಹರಸಾಹಸಪಟ್ಟರೂ ಯಾರಿಗೂ ಹತ್ತಲು ಆಗಿಲ್ಲ. ಪ್ರಯಾಣಿಕರು ರೈಲು ಹೊರಡಲು ಆರಂಭಿಸಿದೆ. ಆಗ ರೈಲು ಪ್ರಯಾಣಿಕರು ರೈಲು ನಿಲ್ಲಿಸುವಂತೆ ಕೂಗಿದ್ದಾರೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ರೈಲು ಹೊರಟು ಹೋಗಿದೆ. ಹೀಗಾಗಿ ನಂತರ ಪ್ರಯಾಣಿಕರ ಸಹಾಯವಾಣಿ ಕೇಂದ್ರದಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಯಾರೂ ಗಮನ ಹರಿಸಿಲ್ಲ ಎಂದು ಹೇಳಲಾಗಿದೆ.
ಚಂದೌಲಿಯ ರೈಲ್ವೆ ನಿಲ್ದಾಣದಿಂದ ನೇರವಾಗಿ ಟಿಕೆಟ್ ಬುಕ್ ಮಾಡಿದ್ದರು. ಈ ರೈಲು ತಪ್ಪಿದ್ದರಿಂದ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ರೈಲ್ವೆ ಅಧಿಕಾರಿಗಳು ತಳ್ಳ ಹಾಕಿದ್ದಾರೆ. ಹೀಗಾಗಿ ಕುಪಿತಗೊಂಡು ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿರುವ ಕಚೇರಿಗೆ ಪ್ರಯಾಣಿಕರು ಆಗಮಿಸಿ ಅಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕೈದು ನೌಕರರನ್ನು ಕೊಠಡಿಯಲ್ಲೇ ಕೂಡಿ ಹಾಕಿದ್ದಾರೆ. ಇದೇ ವೇಳೆ ಗುಂಪಿನಲ್ಲಿದ್ದ ಮಹಿಳೆಯರ ಮನವೊಲಿಸಲು ಯತ್ನಿಸಿದರೂ ತಮ್ಮ ಪಟ್ಟು ಸಡಿಸಲಿಲ್ಲ. ನಂತರ ಜಿಆರ್‌ಪಿ ಮತ್ತು ಆರ್‌ಪಿಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ-ವಿಶಾಖಪಟ್ಟಣ ನಡುವೆ ವಿಶೇಷ ರೈಲು ಸಂಚಾರ: ಹೀಗಿದೆ ವೇಳಾಪಟ್ಟಿ..