ನವದೆಹಲಿ: ಹೊಸ ಫೋನ್ ನಂಬರ್ ಖರೀದಿಸಿದ ಚಂದಾದಾರನ ಕೋರಿಕೆ ಮೇರೆಗೆ ಅಥವಾ 90 ದಿನಗಳ ತನಕ ಮೊಬೈಲ್ ನಂಬರ್ ಉಪಯೋಗವಾಗದೇ ಇದ್ದಲ್ಲಿ ಆ ಸಂಖ್ಯೆಯು ನಿಷ್ಕ್ರಿಯಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾವು ತಿಳಿಸಿದೆ. ಜತೆಗೆ ಆ ನಂಬರ್ ಒಟ್ಟು 45 ದಿನಗಳವರೆಗೆ ವಾಟ್ಸಪ್ನಲ್ಲಿ ಸಕ್ರಿಯವಾಗಿಲ್ಲದಿದ್ದರೆ, ಅದೇ ನಂಬರಿನ ವಾಟ್ಸಪ್ ಖಾತೆಯನ್ನು ಬೇರೆ ಮೊಬೈಲ್ನಲ್ಲಿ ಸಕ್ರಿಯಗೊಳಿಸಿದರೆ ಹಳೆಯ ವಾಟ್ಸಪ್ ಡೇಟಾವನ್ನು ಸ್ವತಃ ವಾಟ್ಸಪ್ ತೆಗೆದುಹಾಕಲಿದೆ.
ಪ್ರತಿವಾದಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾವು (TRAI), 'ಸೆಲ್ಯುಲಾರ್ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಒಮ್ಮೆ ಬಳಕೆಯಾಗದಿದ್ದಕ್ಕಾಗಿ ನಿಷ್ಕ್ರಿಯಗೊಳಿಸಿದರೆ ಅಥವಾ ಚಂದಾದಾರರ ಕೋರಿಕೆಯ ಮೇರೆಗೆ ಸಂಪರ್ಕ ಕಡಿತಗೊಳಿಸಿದರೆ, ಕನಿಷ್ಠ 90 ದಿನಗಳ ಅವಧಿಯವರೆಗೆ ಹೊಸ ಚಂದಾದಾರರಿಗೆ ಹಂಚಿಕೆಯಾಗುವುದಿಲ್ಲ' ಎಂಬ ಟ್ರಾಯ್ ಅಫಿಡವಿಟ್ ಅನ್ನು ವಕೀಲ ಸಂದೀಪ್ ಕಪೂರ್ ಮೂಲಕ ಕೋರ್ಟ್‌ಗೆ ಸಲ್ಲಿಸಿದೆ.
ಇದರ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಎನ್ ಭಟ್ಟಿ ಅವರನ್ನೊಳಗೊಂಡ ಪೀಠ ನಡೆಸಿದೆ. ವಾಟ್ಸಪ್ ಸಹಾಯ ಕೇಂದ್ರದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಫೋನ್ ಸಂಖ್ಯೆಗಳ ಮರು-ಬಳಕೆ ಸಂದರ್ಭದಲ್ಲಿ ಗೊಂದಲವನ್ನು ನಿವಾರಿಸಲು, ಅವರು ಖಾತೆ ನಿಷ್ಕ್ರಿಯತೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಖಾತೆಯು 45 ದಿನಗಳವರೆಗೆ ನಿಷ್ಕ್ರಿಯವಾಗಿದ್ದರೆ, ನಂತರ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಜತೆಗೆ ಬೇರೆ ಮೊಬೈಲ್ ಸಾಧನದಲ್ಲಿ, ಹಳೆಯ ವಾಟ್ಸಪ್ ಖಾತೆಯ ಡೇಟಾವನ್ನು ತೆಗೆದುಹಾಕಲಾಗುತ್ತದೆ.