ನವದೆಹಲಿ : ದೇಶದಲ್ಲೀಗ ಟೊಮೆಟೊ ಬೆಲೆ ಏರಿಕೆಯದ್ದೇ ಹೆಚ್ಚು ಚರ್ಚೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿಗೆ 300 ರೂ.ವರೆಗೂ ತಲುಪುವ ಸಾಧ್ಯತೆ ಇದೆ. ಶನಿವಾರ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಕಿಲೋಗ್ರಾಂ ಟೊಮೆಟೊ 250 ರೂಪಾಯಿಯಂತೆ ಮಾರಾಟವಾಗುತ್ತಿತ್ತು.
ಕೇಂದ್ರದಿಂದ ರಿಯಾಯಿತಿ ದರದಲ್ಲಿ ಮಾರಾಟ: ಕೇಂದ್ರ ಸರ್ಕಾರ ನೀಡಿದ ಅಂಕಿಅಂಶಗಳ ಪ್ರಕಾರ, ಅಖಿಲ ಭಾರತ ಸರಾಸರಿ ಬೆಲೆ ಪ್ರತಿ ಕೆಜಿ ಟೊಮೆಟೊಗೆ ಸುಮಾರು 117 ರೂ. ಇದೆ. ಆದರೆ, ಚಿಲ್ಲರೆ ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು ದೆಹಲಿ-ಎನ್‌ಸಿಆರ್, ಪಾಟ್ನಾ ಮತ್ತು ಲಕ್ನೋದಂತಹ ಆಯ್ದ ನಗರಗಳಲ್ಲಿ ಕೆಜಿಗೆ 90 ರೂ.ಗೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡುತ್ತಿದೆ. ಮೊಬೈಲ್ ವ್ಯಾನ್‌ಗಳ ಮೂಲಕ ಶನಿವಾರ ದೆಹಲಿ-ಎನ್‌ಸಿಆರ್‌ನಲ್ಲಿ ಸುಮಾರು 18,000 ಕೆ.ಜಿ ಮಾರಾಟವಾಗಿದೆ.
ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್)ವು ಕೇಂದ್ರದ ಪರವಾಗಿ ಮೊಬೈಲ್ ವ್ಯಾನ್‌ಗಳ ಮೂಲಕ ಟೊಮೆಟೊ ಮಾರಾಟ ಮಾಡುತ್ತಿವೆ. "ದೆಹಲಿ ಮತ್ತು ನೋಯ್ಡಾದ ವಿವಿಧ ಭಾಗಗಳ ಜೊತೆಗೆ, ಲಕ್ನೋ, ಪಾಟ್ನಾ ಮತ್ತು ಮುಜಾಫರ್‌ಪುರದಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಪ್ರಾರಂಭವಾಗಿದೆ" ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್) ದೆಹಲಿ ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಟೊಮೆಟೊಗಳನ್ನು ಖರೀದಿಸಿದೆ. ಓಖ್ಲಾ ಮತ್ತು ನೆಹರು ಪ್ಲೇಸ್‌ನಂತಹ ಪ್ರದೇಶಗಳಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೇ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ 20 ಮೊಬೈಲ್ ವ್ಯಾನ್‌ಗಳನ್ನು ಸಹ ನಿಯೋಜಿಸಲಾಗಿದೆ. ಆ ಮೂಲಕ ಹೊರ ರಾಜ್ಯಗಳಿಂದ ತಂದಿರುವ ಟೊಮೆಟೊ ದಾಸ್ತಾನನ್ನು ಕೆಜಿಗೆ 90 ರೂ.ಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ತೀವ್ರ ನೆರೆಯಿಂದ ತತ್ತರಿಸುತ್ತಿರುವ ಪ್ರದೇಶಗಳ ಜನರಿಗೆ ಕೇಂದ್ರ ಸರ್ಕಾರದ ಈ ಕ್ರಮ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡಿದೆ.
ಇದನ್ನೂ ಓದಿ :ಟೊಮೆಟೊ ಮಾರಿದ ಹಣ ಇದೆ ಎಂದು ರೈತನ ಕೊಂದ ದುಷ್ಕರ್ಮಿಗಳು: ಚಿನ್ನಾಭರಣ ಸಮೇತ ಫ್ರಿಡ್ಜ್ನಲ್ಲಿದ್ದ ಟೊಮೆಟೊ ಕಳವು!
ಪ್ರಮುಖ ಮಹಾನಗರಗಳಲ್ಲಿ ಟೊಮೆಟೊ ಬೆಲೆ :ಪ್ರಮುಖ ಮಹಾನಗರಗಳಲ್ಲಿ ಟೊಮೆಟೊ ದರ ನೋಡುವುದಾರೆ, ದೆಹಲಿಯಲ್ಲಿ ಕೆಜಿಗೆ 178 ರೂ. ಇದ್ದು, ಮುಂಬೈನಲ್ಲಿ ಕೆಜಿಗೆ 150 ರೂ. ಮತ್ತು ಚೆನ್ನೈನಲ್ಲಿ ಕೆಜಿಗೆ 132 ರೂ. ಇದೆ. ಹಾಪುರದಲ್ಲಿ ಕೆಜಿ ಟೊಮೆಟೊ ಗರಿಷ್ಠ 250 ರೂ. ಗೆ ಮಾರಾಟವಾಗುತ್ತಿದೆ. ಮುಂಗಾರು ಮಳೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ದರದಲ್ಲಿ ತೀವ್ರ ಏರಿಕೆಯಾಗಿದೆ. ಈ ಬೆಲೆ ಏರಿಕೆಯು ಜುಲೈ, ಆಗಸ್ಟ್ ಮತ್ತು ಅಕ್ಟೋಬರ್ ಹಾಗು ನವೆಂಬರ್ ಅವಧಿಯವರೆಗೆ ಮುಂದುವರೆಯುವ ಸಾಧ್ಯತೆ ಇದೆ.