ಟೋಕಿಯೋ(ಜಪಾನ್): ಭಾರತದ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್ನಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭ ಕಂಡಿದೆ. ಸೌತ್ ಪಿಚ್ನ ಓಯಿ ಹಾಕಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಅನ್ನು 3-2 ಗೋಲುಗಳಿಂದ ಸೋಲಿಸಿದೆ.
ಹರ್ಮನ್ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದ್ದು, ರೂಪಿಂದರ್ ಪಾಲ್ ಸಿಂಗ್ ಒಂದು ಗೋಲು ಗಳಿಸಿದ್ದಾರೆ. ಅನುಭವಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಅವರ ಅತ್ಯದ್ಭುತ ಗೋಲ್ ಕೀಪಿಂಗ್ ಕಿವೀಸ್ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಮೊದಲು ಸಿಕ್ಕ ಪೆನಾಲ್ಟಿ ಕಾರ್ನರ್ ವಿಫಲವಾಗಿದ್ದ ರೂಪಿಂದರ್ 10ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದಕ್ಕೂ ಮೊದಲು ಕೇನ್ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಭಾಗದಲ್ಲಿ 1-1 ಸಮಬಲವನ್ನು ಎರಡೂ ತಂಡಗಳು ಕಾಯ್ದುಕೊಂಡಿದ್ದವು.