ನವದೆಹಲಿ:ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಮಂದಿ ಸಾವಿಗೀಡಾಗಿದ್ದು, ಇವರ ಪಾರ್ಥಿವ ಶರೀರಗಳನ್ನ ಈಗಾಗಲೇ ತಮಿಳುನಾಡಿನ ಸುಲೂರು ಏರ್ಬೇಸ್ನಿಂದ ದೆಹಲಿಗೆ ರವಾನೆ ಮಾಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ರಾತ್ರಿ 8 ಗಂಟೆ ವೇಳೆ ಎಲ್ಲರ ಪಾರ್ಥಿವ ಶರೀರ ದೆಹಲಿ ಪಾಲಂ ಏರ್ಬೇಸ್ಗೆ ಬರಲಿವೆ.
ರಾವತ್ ಸೇರಿ ಎಲ್ಲರ ಪಾರ್ಥಿವ ಶರೀರ ದೆಹಲಿಯತ್ತ ರವಾನೆ ವೀರ ಯೋಧರ ಪಾರ್ಥಿವ ಶರೀರ ದೆಹಲಿಯ ಪಾಲಂ ಏರ್ಬೇಸ್ಗೆ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್ಎಸ್ಎ ಅಜಿತ್ ದೋವಲ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಇದಾದ ಬಳಿಕ ಎಲ್ಲ ಯೋಧರ ಮೃತದೇಹ ಆಯಾ ರಾಜ್ಯಗಳಿಗೆ ರವಾನೆಯಾಗಲಿದ್ದು, ನಾಳೆ ಅಥವಾ ನಾಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ತಮಿಳುನಾಡಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು.
ಭಾರತೀಯ ವಾಯುಪಡೆಯ Mi-17V5 ಹೆಲಿಕಾಪ್ಟರ್ನಲ್ಲಿ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಅಧಿಕಾರಿಗಳಾದ ಗುರುಸೇವಕ್ ಸಿಂಗ್, ಜಿತೇಂದ್ರ ಕುಮಾರ್, ವಿವೇಕ್ ಕುಮಾರ್, ಸಾಯಿತೇಜಾ, ಸತ್ಪಾಲ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ತಮಿಳುನಾಡಿನ ನೀಲಗಿರಿಯಲ್ಲಿ ಹೆಲಿಕಾಪ್ಟರ್ ಪತನಗೊಂಡು 13 ಜನ ಸಾವನ್ನಪ್ಪಿದ್ದು, ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದಾರೆ.