ತಿರುಚ್ಚಿ(ತಮಿಳುನಾಡು): ಮೇಕೆದಾಟು ವಿಚಾರವಾಗಿ ಕಳೆದ ಕೆಲ ದಿನಗಳಿಂದ ಕರ್ನಾಟಕ-ತಮಿಳುನಾಡು ಸರ್ಕಾರದ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇದೇ ವಿಚಾರವಾಗಿ ತಮಿಳುನಾಡಿನ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾತನಾಡಿದ್ದು, ಈ ವಿಚಾರದಲ್ಲಿ ತಾವು ತಮಿಳುನಾಡು ಸರ್ಕಾರಕ್ಕೆ ಬೆಂಬಲ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಮೇಕೆದಾಟು ವಿಚಾರದಲ್ಲಿ ನಮ್ಮ ಬೆಂಬಲ ತಮಿಳುನಾಡು ಸರ್ಕಾರಕ್ಕೆ ಎಂದ ಅಣ್ಣಾಮಲೈ ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಬಿಜೆಪಿ ಇಲ್ಲಿನ ರೈತರು ಹಾಗೂ ಜನತೆಯ ಪರವಾಗಿ ನಿಲ್ಲಲಿದ್ದು, ಇದರಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಲ್ಲ ಎಂದು ಹೇಳಿದ್ದಾರೆ. ಮೇಕೆದಾಟು ಯೋಜನೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ,ನಾವು ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿರಿ: ಬಿಗ್ಬಾಸ್ ಮನೆಯಲ್ಲಿ ಒಂದಾದ ಮಾವ-ಅಳಿಯ... ಮಂಜುಗೆ ಕೈತುತ್ತು ತಿನ್ನಿಸಿದ ಪ್ರಶಾಂತ್!
ತಮಿಳುನಾಡಿನಲ್ಲಿರುವ ರೈತರು ಯಾವುದೇ ರೀತಿಯ ತೊಂದರೆ ಅನುಭವಿಸಬಾರದು. ಸುಪ್ರೀಂಕೋರ್ಟ್ ನಿಗದಿಪಡಿಸಿರುವಂತೆ ನಮಗೆ ನೀರು ಪಡೆದುಕೊಳ್ಳುವ ಹಕ್ಕಿದೆ ಎಂದು ತಿಳಿಸಿದ್ದಾರೆ.ಇದೇ ವೇಳೆ ಮೇಕೆದಾಟು ವಿಚಾರವಾಗಿ ನೀವೂ ಕರ್ನಾಟಕದ ಮುಖ್ಯಮಂತ್ರಿ ಜೊತೆ ಮಾತನಾಡಲು ಸಿದ್ಧವೇ? ಎಂದು ಕೇಳಿರುವ ಪ್ರಶ್ನೆಗೆ ಈ ಸಮಸ್ಯೆ ಇತ್ಯರ್ಥಗೊಳಿಸಲು ಎಲ್ಲ ಪಕ್ಷಗಳ ಸಾಂಘಿಕ ಪ್ರಯತ್ನ ಅಗತ್ಯ ಎಂದಿದ್ದಾರೆ. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಣ್ಣಾಮಲೈ ಇಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.