ಕರ್ನಾಟಕ

karnataka

ETV Bharat / bharat

ಡಿ.ಕೆ.ಸುರೇಶ್‌ ಸೇರಿದಂತೆ ಮತ್ತೆ ಮೂವರು ಕಾಂಗ್ರೆಸ್ ಸಂಸದರ ಅಮಾನತು; 100ಕ್ಕೇರಿದ ಸಂಖ್ಯೆ

ಗುರುವಾರದ ಕಲಾಪದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಮತ್ತೆ ಮೂವರು ಕಾಂಗ್ರೆಸ್ ಸಂಸದರನ್ನು ಕಲಾಪದಿಂದ ಅಮಾನತು ಮಾಡಲಾಗಿದೆ.

3 more opposition MPs suspended from Lok Sabha, total number now 100
3 more opposition MPs suspended from Lok Sabha, total number now 100

By PTI

Published : Dec 21, 2023, 4:31 PM IST

Updated : Dec 21, 2023, 11:02 PM IST

ಡಿ.ಕೆ.ಸುರೇಶ್‌

ನವದೆಹಲಿ: ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಮತ್ತೆ ಮೂವರು ಕಾಂಗ್ರೆಸ್ ಸಂಸದರನ್ನು ಚಳಿಗಾಲ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಅಲ್ಲಿಗೆ ಲೋಕಸಭೆಯಿಂದ ಅಮಾನತಾದ ಸಂಸದರ ಒಟ್ಟು ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಡಿ.ಕೆ.ಸುರೇಶ್, ದೀಪಕ್ ಬೈಜ್ ಮತ್ತು ನಕುಲ್ ನಾಥ್ ಅವರನ್ನು ಅಮಾನತುಗೊಳಿಸುವ ನಿರ್ಣಯ ಮಂಡಿಸಿದರು.

"ದೀಪಕ್ ಬೈಜ್, ಡಿ.ಕೆ.ಸುರೇಶ್, ನಕುಲ್ ನಾಥ್ ಅವರು ಸದನ ಮತ್ತು ಸಭಾಧ್ಯಕ್ಷರ ಗೌರವವನ್ನು ಸಂಪೂರ್ಣವಾಗಿ ಕಡೆಗಣಿಸಿ ಸದನದ ಬಾವಿಗೆ ಇಳಿದಿರುವುದನ್ನು ಈ ಸದನ ಗಂಭೀರವಾಗಿ ಪರಿಗಣಿಸಿದೆ. ಅಧಿವೇಶನದ ಉಳಿದ ಅವಧಿಗಾಗಿ ಅವರನ್ನು ಸದನದಿಂದ ಅಮಾನತುಗೊಳಿಸಬಹುದು" ಎಂದು ಜೋಶಿ ಹೇಳಿದರು.

ಇದಕ್ಕೂ ಮುನ್ನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಪ್ರತಿಭಟನೆ ನಡೆಸದಂತೆ ಈ ಮೂವರು ಸಂಸದರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಇಂದು ಬೆಳಿಗ್ಗೆ ಸದನ ಸೇರುತ್ತಿದ್ದಂತೆಯೇ ಸಂಸದರ ಅಮಾನತು ಖಂಡಿಸಿ ಇವರು ತಮ್ಮ ಪ್ರತಿಭಟನೆ ಮುಂದುವರೆಸಿದರು. ಅಲ್ಲದೆ ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಚರ್ಚೆ ನಡೆಸುವಂತೆ ಮತ್ತು ಈ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವಂತೆ ಆಗ್ರಹಿಸಿದರು.

ಸೋನಿಯಾ ಗಾಂಧಿ ಖಂಡನೆ: ಭಾರಿ ಸಂಖ್ಯೆಯ ಸಂಸದರನ್ನು ಅಮಾನತು ಮಾಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗಿದೆ ಎಂದು ಹೇಳಿದ್ದಾರೆ. ಭದ್ರತಾ ಲೋಪ ನಡೆದ ಡಿಸೆಂಬರ್ 13ರ ಘಟನೆಗಳ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಲಿ ಎಂಬುದು ಮಾತ್ರ ವಿಪಕ್ಷ ಸಂಸದರ ಒತ್ತಾಯವಾಗಿದೆ. ಆದರೆ ಸರ್ಕಾರ ಈ ಮನವಿಗೆ ಯಾವ ಮಟ್ಟದ ಅಹಂಕಾರದ ಉತ್ತರ ನೀಡಿದೆ ಎಂಬುದನ್ನು ವರ್ಣಿಸಲು ಪದಗಳಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದರ ಪ್ರತಿಭಟನೆ: ಈ ವಾರ ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತುಗೊಂಡ ವಿರೋಧ ಪಕ್ಷದ ಸಂಸದರು ಗುರುವಾರ ಬೆಳಗ್ಗೆ ಹಳೆಯ ಸಂಸತ್ ಕಟ್ಟಡದಿಂದ ಕೇಂದ್ರ ದೆಹಲಿಯ ವಿಜಯ್ ಚೌಕ್ ವರೆಗೆ ಸುಮಾರು ಒಂದು ಕಿಲೋ ಮೀಟರ್​ ದೂರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಹುತೇಕ ವಿರೋಧ ಪಕ್ಷಗಳ ಸಂಸದರನ್ನು ಹೊರಹಾಕಿ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಂಗೀಕರಿಸಿದ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಇಂದಿನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಡಿ.ಕೆ.ಸುರೇಶ್ ಹೇಳಿದ್ದೇನು?:ಕಾನೂನು ಎಲ್ಲರಿಗೂ ಒಂದೇ ಮಾಡಿ. ಇವತ್ತು ಇದೇ ವಿಚಾರವಾಗಿ ಬೇರೆ ವಿರೋಧಪಕ್ಷದ ಒಬ್ಬ ಸದಸ್ಯ ಸಹಿ ಹಾಕಿದಿದ್ದರೆ ಅಥವಾ ಯಾರಾದರೂ ಒಬ್ಬ ವಿರೊಧ ಪಕ್ಷದವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದಿದ್ದರೆ ನಿಮ್ಮ ಸರ್ಕಾರ ಸುಮ್ಮನಿರುತ್ತಿತ್ತಾ ಎಂಬುದನ್ನು ನಾವು ಪ್ರಶ್ನೆ ಮಾಡುತ್ತಿದ್ದೇವೆ. ಯಾವ ರೀತಿಯಾಗಿ ನೀವು ವಿರೋಧ ಪಕ್ಷದವರನ್ನು ಹತ್ತಿಕ್ಕುವ ಪ್ರಯತ್ನವನ್ನು ಕ್ಷಣ ಕ್ಷಣಕ್ಕೂ ಮಾಡುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಇವತ್ತು ವಿರೋಧಪಕ್ಷದವರು ಇಲ್ಲ ಅಂದಿದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುತ್ತಿರಲಿಲ್ಲ. ಇವತ್ತು ಡಿಕ್ಟೇಟರ್​ಶಿಪ್​ನಲ್ಲಿ ಸರ್ಕಾರ ನಡೆಯುತ್ತಾ ಇದೆ. ಯಾವ ಸಂಸ್ಥೆಗಳೂ ಬಾಕಿ ಉಳಿದುಕೊಂಡಿಲ್ಲ. ಇವತ್ತು ಬಿಲ್​ಗಳನ್ನು ಪಾಸ್ ಮಾಡುತ್ತಿದ್ದಾರೆ. ಯಾರದ್ದು ಅಡ್ಡಿ ಆತಂಕಗಳು ಏನೂ ಇಲ್ಲ. ಆದರೆ ಇವತ್ತು 130 ಕೋಟಿ ಜನರ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕು. ಅದಕೋಸ್ಕರ ಕಾಂಗ್ರೆಸ್​ ಹೋರಾಟ ಮಾಡುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ:ದೂರಸಂಪರ್ಕ, ಚುನಾವಣಾ ಆಯುಕ್ತರ ನೇಮಕ ಮಸೂದೆ ಅಂಗೀಕಾರ: ಮಹತ್ವವೇನು?

Last Updated : Dec 21, 2023, 11:02 PM IST

ABOUT THE AUTHOR

...view details