ರಾಜ್ನಂದಗಾಂವ್ (ಛತ್ತೀಸ್‌ಗಢ): ರಾಜ್ನಂದಗಾಂವ್ನಲ್ಲಿ ಮೂರು ಕಣ್ಣುಗಳಿರುವ ಕರುವೊಂದು ಜನಿಸಿದ್ದು, ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಇದು ದೇವರ ದರ್ಶನವೆಂಬ ನಂಬಿಕೆಯಿಂದ ಕರುವನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದಾರೆ.
ಈ ಅಪರೂಪದ ಕರುವನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದು, ಕೆಲವರು ಇದು ಭೋಲೆನಾಥನ ಅವತಾರವೆಂದು ನಂಬಿದ್ದಾರೆ. ಅಷ್ಟೇ ಅಲ್ಲದೇ ಅಗರಬತ್ತಿ, ಹೂ, ತೆಂಗಿನಕಾಯಿ ಮತ್ತು ಹಣವನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ಹೊರಳೆಗಳಿರುವ ಕರು ಜನನ ಈ ಕರುವಿಗೆ ಎರಡು ಕಣ್ಣುಗಳ ಜೊತೆ ಹಣೆಯ ಮಧ್ಯದಲ್ಲಿ ಮತ್ತೊಂದು ಕಣ್ಣು ಹಾಗೂ ಮೂಗಿನಲ್ಲಿ ನಾಲ್ಕು ಹೊರಳೆಗಳಿವೆ. ಗಂಡಾಯಿ ಪ್ರದೇಶದ ಬುಂದೇಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೋಧಿ ನವಗಾಂವ್‌ನಲ್ಲಿ ಹಸುವೊಂದು ಇಂತಹ ಕರುವಿಗೆ ಜನ್ಮ ನೀಡಿದೆ.
ಲೋಧಿ ನವಗಾಂವ್‌ನ ಹೇಮಂತ್ ಚಂದೇಲ್ ಅವರ ಹಸು ಈ ರೀತಿಯ ಕರುವಿಗೆ ಜನ್ಮ ನೀಡಿದ್ದು, ಅವರು ಕೃಷಿಯ ಹೊರತಾಗಿ ಹಸು ಸಾಕಣೆಯಲ್ಲಿ ತೊಡಗಿದ್ದರು. ಹಸು ಕಳೆದ ಕೆಲವು ತಿಂಗಳ ಹಿಂದೆ ಗರ್ಭ ಧರಿಸಿತ್ತು. ಮಕರ ಸಂಕ್ರಾಂತಿಯ ದಿನ ಸಂಜೆ 7 ಗಂಟೆ ಸುಮಾರಿಗೆ ಹಸು ಕರುವಿಗೆ ಜನ್ಮ ನೀಡಿದೆ. ಈ ಕರುವಿಗೆ ಮೂರು ಕಣ್ಣುಗಳಿದ್ದು, ಒಂದು ಕಣ್ಣು ತಲೆಯ ಮಧ್ಯಭಾಗದಲ್ಲಿದೆ. ಅದರ ಮೂಗಿನಲ್ಲಿ ಎರಡರ ಬದಲು ನಾಲ್ಕು ಹೊರಳೆಗಳಿವೆ. ಅಲ್ಲದೆ ಇದರ ಬಾಲವು ಕೂದಲು ರಹಿತವಾಗಿದೆ.
ಇದನ್ನೂ ಓದಿ: ನಾಳೆ ಪಂಜಾಬ್‌ಗೆ ಸಿಎಂ ಅಭ್ಯರ್ಥಿ ಹೆಸರು ಘೋಷಿಸಲಿರುವ ಕೇಜ್ರಿವಾಲ್
ಪಶುವೈದ್ಯ ಡಾ.ನರೇಂದ್ರ ಸಿಂಗ್ ಅವರು ಈ ಬಗ್ಗೆ ಮಾತನಾಡಿದ್ದು, ಇದು ಯಾವುದೇ ರೀತಿಯ ಪವಾಡ ಅಲ್ಲ. ಹಸುವಿನ ಹೊಟ್ಟೆಯಲ್ಲಿ ಭ್ರೂಣವು ಸರಿಯಾಗಿ ಬೆಳವಣಿಗೆಯಾಗದ ಕಾರಣ ಈ ರೀತಿ ಕರು ಹುಟ್ಟಿದೆ. ನಿಗದಿತ ಸಮಯದಲ್ಲಿ ಭ್ರೂಣವು ಸರಿಯಾಗಿ ಬೆಳವಣಿಗೆ ಆಗದಿದ್ದಾಗ ಇಂತಹ ಸಮಸ್ಯೆಗಳು ಮುನ್ನೆಲೆಗೆ ಬರುತ್ತವೆ ಎಂದಿದ್ದಾರೆ.