ಮುಂಬೈ (ಮಹಾರಾಷ್ಟ್ರ):ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಸಚಿವಾಲಯದ ಮುಂದೆ ಮೂವರು ವ್ಯಕ್ತಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಇದರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇಲ್ಲಿನ ಧೂಳೆ ಎಂಐಡಿಸಿ ಪ್ರದೇಶದ ನಿವಾಸಿ ಶೀತಲ್ ಗಡೇಕರ್ (47) ಮೃತಪಟ್ಟಿದ್ದಾರೆ. ಇವರು ಸಚಿವಾಲಯದ ಮುಖ್ಯ ದ್ವಾರದ ಮುಂಭಾಗದಲ್ಲಿ ಕೀಟನಾಶಕ ಸೇವಿಸಿದ್ದರು. ತಕ್ಷಣವೇ ಸರ್ ಜೆಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಶೀತಲ್ ಅವರ ಪತಿ ರವೀಂದ್ರ ಗಡೇಕರ್ ಅವರು ಧೂಳೆ ಎಂಐಡಿಸಿ ಪ್ರದೇಶದ ಹೆಸರಿನಲ್ಲಿ 9 ಗುಂಟೆ ಜಾಗ ಹೊಂದಿದ್ದರು. ಈ ಜಾಗವನ್ನು ನರೇಶ್ ಕುಮಾರ್ ಮನೋಜ್ ಎಂಬುವವರಿಗೆ ಗುತ್ತಿಗೆ ನೀಡಿದ್ದರು. ಆದರೆ, 2010ರಲ್ಲಿ ಅಂದಿನ ಎಂಐಡಿಸಿ ಅಧಿಕಾರಿಗಳ ಮೂಲಕ ಮನೋಜ್, ನಕಲಿ ನೋಟರಿ ಮಾಡಿಸಿಕೊಂಡು ತನ್ನ ಹೆಸರಿಗೆ ಜಮೀನು ಮಾಡಿಕೊಂಡು ವಂಚಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮೊಹಾದಿ ಪೊಲೀಸ್ ಠಾಣೆಯಲ್ಲಿ ಶೀತಲ್ ಹಲವು ಬಾರಿ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೇ, ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಹತಾಶೆಯಿಂದ ಸಚಿವಾಲಯದ ಎದುರು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಪೊಲೀಸರು ಶೀತಲ್‌ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.