ಹೈದರಾಬಾದ್(ತೆಲಂಗಾಣ): ಕ್ರಿಪ್ಟೋಕರೆನ್ಸಿ ಹೂಡಿಕೆಯ ಹೆಸರಿನಲ್ಲಿ ಹಾಗೂ ಹೆಚ್ಚು ಕಮೀಷನ್ ನೀಡುವ ಆಸೆ ತೋರಿಸಿ ವಂಚನೆ ಮಾಡುತ್ತಿದ್ದ ಆರೋಪದಲ್ಲಿ ಪಶ್ಚಿಮ ಬಂಗಾಳ ಮೂಲದ ಮೂವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ರಾಚಕೊಂಡ ಸೈಬರ್ ಕ್ರೈಂ ವಿಭಾಗದ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ವಂಚಕರನ್ನು ಬಂಧಿಸಿದ್ದು, ಬಂಧಿತರಿಂದ 6 ಸಿಮ್ ಕಾರ್ಡ್‌ಗಳು, 5 ಮೊಬೈಲ್ ಫೋನ್‌ಗಳು, 3 ಬ್ಯಾಂಕ್ ಚೆಕ್‌ಬುಕ್‌ಗಳು ಮತ್ತು 6 ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಿದ್ದಾರೆ. ಇದರ ಜೊತೆಗೆ, ಆರೋಪಿಗಳ 64 ಖಾತೆಗಳಲ್ಲಿದ್ದ ಸುಮಾರು 50 ಲಕ್ಷ ರೂಪಾಯಿಯನ್ನು ಸದ್ಯಕ್ಕೆ ಫ್ರೀಜ್ ಮಾಡಲಾಗಿದೆ.
ಐಕ್ರಂ ಹುಸೇನ್, ನೂರ್ ಆಲಂ ಮತ್ತು ಇಜಾರುಲ್ ಬಂಧಿತರಾಗಿದ್ದು, ಪ್ರಮುಖ ಆರೋಪಿಯಾದ ಪಶ್ಚಿಮ ಬಂಗಾಳದ ಸಿಲಿಗುರಿಮೂಲದ ಛೋಟಾ ಭಾಯ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ಛೋಟಾ ಭಾಯ್ ಪಶ್ಚಿಮ ಬಂಗಾಳದ ಸಿಲಿಗುರಿ ಮೂಲದವ. ಈತ ಸ್ಥಳೀಯ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ನೂರ್ ಆಲಂನೊಂದಿಗೆ ಸೇರಿ ಹಣ ವರ್ಗಾವಣೆಗೆ ಅನುಕೂಲವಾಗುವ 14 'ಶೆಲ್ ಕಂಪನಿ'ಗಳನ್ನು ಸ್ಥಾಪನೆ ಮಾಡಿದ್ದ. ದೇಶದ ವಿವಿಧೆಡೆ ಹಣ ಸಂಗ್ರಹಣೆ ಮಾಡಲು ಅಂದರೆ ಅವರನ್ನು ಆನ್ಲೈನ್ನಲ್ಲಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಲು ಹಾಗೂ ಹೂಡಿಕೆ ಮಾಡಿಸಲು ಐಕ್ರಂ ಹುಸೇನ್ ಮತ್ತು ಇಜಾರುಲ್ ಅವರನ್ನು ನೇಮಕ ಮಾಡಲಾಗಿತ್ತು.
ಆರೋಪಿಗಳು ತೆಲಂಗಾಣದ ನಾಂಪಲ್ಲಿಯಲ್ಲಿ ಸುಮಾರು 86 ಲಕ್ಷ ರೂಪಾಯಿಯನ್ನು ಹಲವರಿಂದ ಹೂಡಿಕೆ ಮಾಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ಮೂವರನ್ನು ಬಂಧಿಸಿದ್ದಾರೆ. ಛೋಟಾಭಾಯ್ ತಲೆಮರೆಸಿಕೊಂಡಿದ್ದಾನೆ. ಈ ಗ್ಯಾಂಗ್ ದೇಶಾದ್ಯಂತ ಕ್ರಿಪ್ಟೋಕರೆನ್ಸಿ ಹೆಸರಲ್ಲಿ ವಂಚನೆ ಮಾಡಿರುವ ಸಾಧ್ಯತೆ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಹಮದ್‌ನಗರ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಅವಘಡ; 10 ಮಂದಿ ದುರ್ಮರಣ