ಮನೆಯ ಬಾಲ್ಕನಿಯಲ್ಲಿ ಕುಳಿತು ಆಕಾಶದಿಂದ ಧರೆಗೆ ಬೀಳುವ ಮಳೆ ಹನಿಗಳನ್ನು ನೋಡುತ್ತ ಬಿಸಿಯಾದ ಟೀ ಕುಡಿಯುತ್ತ ಮಾನ್ಸೂನ್ ಆನಂದಿಸುವುದು ಎಂದರೆ ಅದರ ಮಜವೇ ಬೇರೆ. ಇನ್ನು ಮಳೆಯೊಂದಿಗೆ ಬೀಸುವ ತಂಗಾಳಿ ಚಳಿ ಜ್ವರವನ್ನೂ ಜೊತೆಗೆ ತರುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ನೆಗಡಿ ಕೆಮ್ಮಿನ ಸೋಂಕು ಬಾರದಿರಲು ಹರ್ಬಲ್ ಟೀ ರಾಮಬಾಣವಾಗಿದೆ.
ಬಹುತೇಕ ಭಾರತೀಯರಿಗೆ ಟೀ ಅಂದ್ರೆ ಇಷ್ಟ. ಬಿಸಿಯಾದ ಹಬೆಯಾಡುವ ಟೀ ಜೊತೆಗೆ ಒಂದಿಷ್ಟು ಘಮಘಮಿಸುವ ಗಿಡಮೂಲಿಕೆಗಳು ಸೇರಿದರೆ.. ಆಹಾ.. ಎಂಥ ಅದ್ಭುತ. ಹಾಗಾದರೆ ಬನ್ನಿ.. ಹಬೆಯಾಡುವ ಆರೋಗ್ಯಕರ ಹರ್ಬಲ್ ಟೀ ತಯಾರಿಸುವುದು ಹೇಗೆಂದು ತಿಳಿಯೋಣ
ತುಳಸಿ ಟೀ: ರೋಗನಿವಾರಣೆಯ ವಿಷಯದಲ್ಲಿ ತುಳಸಿಯಂಥ ಗಿಡಮೂಲಿಕೆ ಮತ್ತೊಂದಿಲ್ಲ. ಒಂದು ಕಪ್ ತುಳಸಿ ಟೀ ಸೇವಿಸಿದರೆ ಸಾಕು.. ಎದೆ ಬಿಗಿತ, ಕಫ ಕಟ್ಟುವಿಕೆ, ಮೂಗು ಕಟ್ಟುವಿಕೆ, ನೆಗಡಿ ಕೆಮ್ಮಿನ ಲಕ್ಷಣಗಳು .. ಹೀಗೆ ಎಲ್ಲವೂ ಮಾಯವಾಗುತ್ತವೆ. ತುಳಸಿಯಲ್ಲಿರುವ ವಿಟಮಿನ್ ಎ, ಡಿ, ಕಬ್ಬಿಣ, ಫೈಬರ್ ಮತ್ತು ಇತರ ಅಂಶಗಳು ದೇಹದೊಳಗಿನ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಉತ್ತಮ ಬಾಯಿ ಆರೋಗ್ಯ ಹಾಗೂ ಹಲ್ಲುಗಳ ಆರೋಗ್ಯಕ್ಕೆ ತುಳಸಿ ಬೆಸ್ಟ್ ಆಗಿದೆ.
ಅರಿಶಿಣ ಟೀ:ಅರಿಶಿಣದಲ್ಲಿರುವ ಕರ್ಕುಮಿನ್, ಡೆಸ್ಮೆ ಕಾಕ್ಸಿ ಕರ್ಕುಮಿನ್ ಮುಂತಾದ ಅಂಶಗಳು ಶರೀರವನ್ನು ಆಂತರಿಕವಾಗಿ ಬಲಿಷ್ಠಗೊಳಿಸುತ್ತವೆ. ಅರಿಶಿಣ ಬ್ಯಾಕ್ಟೀರಿಯಾ ನಿರೋಧಕವಾಗಿರುವುದರಿಂದ, ಮುಂಗಾರಿನಲ್ಲಿ ಕಾಡುವ ಹಲವಾರು ಸೋಂಕುಗಳಿಂದ ರಕ್ಷಣೆ ಸಿಗುತ್ತದೆ. ನೆಗಡಿ ಮತ್ತು ಗಂಟಲು ಕೆರೆತದ ಲಕ್ಷಣಗಳನ್ನು ನಿವಾರಿಸಲು ಅರಿಶಿಣ ಉಪಯುಕ್ತವಾಗಿದೆ. ಚರ್ಮದ ಮೇಲೆ ಗಾಯವಾದಾಗ ಅರಿಶಿಣ ಹಚ್ಚಿದರೆ ಗಾಯ ಬೇಗನೆ ಉಪ ಶಮನವಾಗುತ್ತದೆ.
ಸಪ್ತಪರ್ಣ ಟೀ: ಮುಂಗಾರು ಹಂಗಾಮಿನಲ್ಲಿ ಮಲೇರಿಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳು ಕಾಡುವ ಸಾಧ್ಯತೆ ಜಾಸ್ತಿ. ಇಂಥ ರೋಗಗಳ ವಿರುದ್ಧ ಹೋರಾಡುವಲ್ಲಿ ಪ್ರಾಚೀನ ಗಿಡಮೂಲಿಕೆಯಾದ ಸಪ್ತಪರ್ಣ ತುಂಬಾ ಉಪಯುಕ್ತವಾಗಿದೆ. ಮಲೇರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಈ ಮೂಲಿಕೆ, ಜ್ವರವನ್ನು ಸಹ ಕಡಿಮೆ ಮಾಡುತ್ತದೆ. ಅಲ್ಲದೇ ಚರ್ಮದ ಆರೋಗ್ಯ ಹೆಚ್ಚಿಸಬಲ್ಲ ಇದು ಜೀರ್ಣಾಂಗವ್ಯವಸ್ಥೆ ಸುಧಾರಣೆಗೂ ಉತ್ತಮವಾಗಿದೆ.
ಶುಂಠಿ ಟೀ (ಜಿಂಜರ್ ಟೀ): ರಸ್ತೆಯಲ್ಲಿ ಸಿಗುವ ಸಮೋಸಾ ಬಜ್ಜಿಗಳನ್ನು ನೋಡಿ ಬಾಯಲ್ಲಿ ನೀರೂರುತ್ತದೆ ಅಲ್ಲವೆ? ಆದರೆ ಆಸೆಪಟ್ಟು ಇಂಥವನ್ನೆಲ್ಲ ಜಾಸ್ತಿ ತಿಂದಾಗ ಹೊಟ್ಟೆನೋವು ಬರುವುದು ಸಹಜ. ಇಂಥ ಸಂದರ್ಭದಲ್ಲಿ ಶುಂಠಿ ಟೀ ಅಥವಾ ಜಿಂಜರ್ ಟೀ ಸೇವಿಸುವುದು ಬಹಳ ಪ್ರಯೋಜನಕಾರಿಯಾಗಿರುತ್ತದೆ. ಶುಂಠಿಯು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗಳನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಮಾರ್ನಿಂಗ್ ಸಿಕ್ನೆಸ್ ಅನುಭವಿಸುವ ಜನರಿಗೆ ಶುಂಠಿ ಚಹಾ ತುಂಬಾ ಪರಿಣಾಮಕಾರಿಯಾಗಿದೆ.
ದಾಸವಾಳ ಟೀ: ದಾಸವಾಳವು ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಆಂಥೋಸಯಾನಿನ್‌ಗಳಿಂದ ಸಮೃದ್ಧವಾಗಿದ್ದು, ಟೀಯೊಂದಿಗೆ ಸೇರಿಸುವ ಅತ್ಯುತ್ತಮ ಪದಾರ್ಥಗಳಲ್ಲಿ ಒಂದಾಗಿದೆ. ಇದು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಡುತ್ತದೆ. ಸೋಂಕು ಅಥವಾ ಅನಾರೋಗ್ಯದ ಬಾಧೆಯನ್ನು ತಡೆಯುತ್ತದೆ. ದಾಸವಾಳವು ಹೆಚ್ಚಿನ ಮಟ್ಟದ ಆ್ಯಂಟಿ - ಆಕ್ಸಿಡೆಂಟ್ಗಳನ್ನು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.