ನವದೆಹಲಿ: ವಿವಿಧ ವಿಭಾಗಗಳ ವಾಹನಗಳಿಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನಗಳ ವಿಮಾ ಕಂತುಗಳನ್ನು ಮುಂಬರುವ ಜೂನ್ 1ರಿಂದ ಹೆಚ್ಚಿಸಿ ಕ್ರಮ ಕೈಗೊಂಡಿದೆ. ಈ ನಿರ್ಧಾರದ ಮೂಲಕ ಕಾರು ಮತ್ತು ದ್ವಿಚಕ್ರ ವಾಹನದ ಇನ್ಶೂರೆನ್ಸ್ ವೆಚ್ಚ ಹೆಚ್ಚಾಗಲಿದ್ದು ವಾಹನ ಮಾಲೀಕರಿಗೆ ಹೊರೆಯಾಗುವ ಸಂಭವವಿದೆ.
1,000 ಸಿಸಿ ಸಾಮರ್ಥ್ಯದ ಖಾಸಗಿ ಕಾರುಗಳ ಪ್ರೀಮಿಯಂ ದರವು 2019-10ರಲ್ಲಿದ್ದ 2,072 ರೂ.ಯಿಂದ ಇದೀಗ 2,094 ರೂ.ಗೆ ಹೆಚ್ಚಳ ಆಗಲಿದೆ ಎಂದು ಸಚಿವಾಲಯದ ಪರಿಷ್ಕೃತ ಅಧಿಸೂಚನೆ ತಿಳಿಸಿದೆ. ಅದೇ ರೀತಿ, 1,000 ಮತ್ತು 1,500 ನಡುವಿನ ಸಿಸಿ ಸಾಮರ್ಥ್ಯದ ಎಂಜಿನ್ ಸಾಮರ್ಥ್ಯದ ಖಾಸಗಿ ಕಾರುಗಳ ಹಳೆಯ ಪ್ರೀಮಿಯಂ ದರ ₹3,221 ಇದ್ದು, ಇದೀಗ ₹3,416 ರಷ್ಟಾಗಲಿದೆ. ಆದ್ರೆ, 1,500 ಸಿಸಿ ಸಾಮರ್ಥ್ಯದ ಕಾರು ಮಾಲೀಕರಿಗೆ ಕೊಂಚ ತಲೆಬಿಸಿ ಕಡಿಮೆ. ಏಕೆಂದರೆ, ಪ್ರೀಮಿಯಂ ದರವು ₹7,897 ರಿಂದ ₹7890ಕ್ಕೆ ಇಳಿಯಲಿದೆ.
ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದರೆ, 150 ಸಿಸಿಗಿಂತಲೂ ಹೆಚ್ಚಿನ ಸಾಮರ್ಥ್ಯದ ಮತ್ತು 350 ಸಿಸಿಗಿಂತ ಕಡಿಮೆ ಇರುವ ವಾಹನಗಳ ಪ್ರೀಮಿಯಂ ₹1,366 ಮತ್ತು 350 ಸಿಸಿ ಹೊಂದಿರುವ ವಾಹನಗಳಿಗೆ ₹2,804 ಪ್ರೀಮಿಯಂ ನಿಗದಿಪಡಿಸಲಾಗಿದೆ.