ಅಕ್ಟೋಬರ್ 11 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಇದರ ಅಂಗವಾಗಿ 'ಹ್ಯೂಮನ್ಸ್ ಆಫ್ ಬಾಂಬೆ' (Humans of Bombay) ಎಂಬ ಫೋಟೋ ಬ್ಲಾಗ್ ತನ್ನ ಫೇಸ್ಬುಕ್ ಖಾತೆಯಲ್ಲಿ ಅಮೆರಿಕದ ಮಹಿಳೆಯೊಬ್ಬರ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಈ ಅವಿವಾಹಿತ ಮಹಿಳೆ ಭಾರತದಿಂದ ಐವರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಯುಎಸ್ನ ಕ್ರಿಸ್ಟನ್ ಗ್ರೇ ವಿಲಿಯಮ್ಸ್ ಎಂಬ ಮಹಿಳೆ ತಾನು ತಾಯಿಯಾಗಬೇಕೆಂದು ಕನಸು ಕಂಡಿರುತ್ತಾರೆ. ಆದರೆ ಅವರಿಗೆ ಸಂಗಾತಿಯಿಲ್ಲದ ಕಾರಣ, ತಮ್ಮ 39ನೇ ವಯಸ್ಸಿನಲ್ಲಿ ಮಗುವೊಂದನ್ನು ದತ್ತು ಪಡೆಯಲು ನಿರ್ಧರಿಸುತ್ತಾರೆ. ತನ್ನವರಿಲ್ಲದ ಯಾವುದೇ ಮಗುವಾಗಲಿ ಅದು ಅನಾಥಾಶ್ರಮದಲ್ಲಿರುವುದಕ್ಕಿಂತ ತಮ್ಮ ಮನೆಯಲ್ಲಿ ಇರಿಸಿಕೊಂಡರೆ ಸಂತೋಷವಾಗಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಒಬ್ಬ 'ಒಂಟಿ ಮಹಿಳೆ'ಯಿಂದ ಇದು ಸಾಧ್ಯವೇ ಎಂಬ ಪ್ರಶ್ನೆಯನ್ನು ಬದಿಗೊತ್ತಿ, ಕೊನೆಗೂ ಮಕ್ಕಳನ್ನು ದತ್ತು ಪಡೆದಿದ್ದಾರೆ.
ಬೇರೆ ಬೇರೆ ದೇಶಗಳಿಂದ ದತ್ತು ಪಡೆಯಲು ಮಕ್ಕಳನ್ನು ಅನ್ವೇಷಿಸಲು ಕ್ರಿಸ್ಟನ್ ಗ್ರೇ ವಿಲಿಯಮ್ಸ್ ಪ್ರಾರಂಭಿಸಿದರು. ಮೊದಲು ನೇಪಾಳಕ್ಕೆ ಅರ್ಜಿ ಸಲ್ಲಿಸಿದ ಇವರು 28,000 ಯುಎಸ್ ಡಾಲರ್‌ಗಳನ್ನು ಪಾವತಿಸಿದ್ದರು. ಆದರೆ ಅಮೆರಿಕ ಸರ್ಕಾರವು ನೇಪಾಳದಿಂದ ದತ್ತು ಸ್ವೀಕಾರವನ್ನು ಸ್ಥಗಿತಗೊಳಿಸಿತು.
ವಿಶೇಷ ಚೇತನ ಮಕ್ಕಳ ದತ್ತು ಪಡೆದ ಕ್ರಿಸ್ಟನ್
ಇದರ ನೋವಿನಲ್ಲಿರುವ ವೇಳೆ ಭಾರತದ ದತ್ತು ನೀಡುವ ಏಜೆನ್ಸಿಯಿಂದ ಕ್ರಿಸ್ಟನ್ಗೆ ಕರೆ ಬಂದಿತು. ಆದರೆ ಇದಕ್ಕೆ ಒಂದು ಷರತ್ತು ಇತ್ತು. ವಿಶೇಷ ಚೇತನ ಮಗುವೊಂದನ್ನು ದತ್ತು ತೆಗೆದುಕೊಳ್ಳುವುದಾದರೆ ಮಾತ್ರ ನೀಡುವುದಾಗಿ ಏಜೆನ್ಸಿ ಹೇಳಿತ್ತು. ಒಂದು ಬಾರಿ ತಬ್ಬಿಬ್ಬಾದ ಕ್ರಿಸ್ಟನ್ ಫೋನ್ ಕಟ್ ಮಾಡಿ, ಆಲೋಚಿಸುತ್ತಾ ನಿಂತಿರುವಾಗ ತಕ್ಷಣವೇ ಅವರ ತಾಯಿಯ ಕರೆ ಬಂತು. ಕಾಲ್ ಪಿಕ್ ಮಾಡಿದ ಕ್ರಿಸ್ಟನ್, ದೀರ್ಘ ಉಸಿರು ತೆಗೆದುಕೊಂಡು, "ಅಮ್ಮಾ ನಾನು ವಿಶೇಷ ಚೇತನ ಮಗುವೊಂದಕ್ಕೆ ತಾಯಿಯಾಗುತ್ತಿರುವೆ" ಎಂದು ಹೇಳಿಬಿಟ್ಟರಂತೆ. ಆ ಒಂದೇ ಸೆಕೆಂಡ್ನಲ್ಲಿ ನಾನು ನಿರ್ಧಾರ ತೆಗೆದುಕೊಂಡೆ ಎಂದು ಹೇಳುತ್ತಾರೆ ಕ್ರಿಸ್ಟನ್.