ಕೇರಳ: ವಿಧಾನಸಭಾ ಚುನಾವಣೆಗೆ ಕೇವಲ ಆರು ದಿನಗಳು ಬಾಕಿ ಇರುವಾಗ, ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಪಕ್ಷಗಳ ಅಭಿಯಾನಗಳಿಗೆ ಮುಂದಾಗಿದ್ದಾರೆ. ಕೇರಳದಲ್ಲಿ ಪ್ರಿಯಾಂಕಾ ಮತ್ತು ಮೋದಿ ಉತ್ತರ ಭಾರತದಂತೆಯೇ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ರೋಡ್ ಶೋ ಮತ್ತು ರ‍್ಯಾಲಿಗಳನ್ನು ನಡೆಸಿದ್ದಾರೆ. ಇಬ್ಬರೂ ರಾಜ್ಯದ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರದ ಮೇಲೆ ವಾಗ್ದಾಳಿ ಸಹ ನಡೆಸಿದ್ದಾರೆ. ಅಷ್ಟೇ ಅಲ್ಲ ಪಿಣರಾಯಿ ವಿಜಯನ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು.
ಪಾಲಕ್ಕಾಡ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ, ಕೇರಳದ ಯುಡಿಎಫ್ ಮತ್ತು ಎಲ್‌ಡಿಎಫ್ ಮೇಲೆ ತೀವ್ರ ದಾಳಿ ನಡೆಸಿದರು. ಕೇರಳದ ಯುಡಿಎಫ್ ಮತ್ತು ಎಲ್‌ಡಿಎಫ್ ನಾಯಕರು ಗೂಂಡಾಗಳಂತೆ ಇದ್ದಾರೆ ಎಂದು ಹೇಳಿದ ಮೋದಿ, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಹಿಂಸಾಚಾರ ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಶಾಂತಿ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವ ಸರ್ಕಾರಕ್ಕಾಗಿ ಬಿಜೆಪಿಗೆ ಮತ ಚಲಾಯಿಸುವಂತೆ ಪ್ರಧಾನಿ ಕೇರಳ ಜನರನ್ನು ಕೋರಿದರು.
ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ
ಪ್ರಿಯಾಂಕಾ ಗಾಂಧಿ ಮಂಗಳವಾರ ಕೊಲ್ಲಂನಲ್ಲಿ ನಡೆದ ಸಾರ್ವಜನಿಕ ಸಮಾವೇಶ ಮತ್ತು ಕಾಯಂಕುಲಂನಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದರು. ‘ಲವ್ ಜಿಹಾದ್’ ಸೇರಿದಂತೆ ವಿಷಯಗಳಲ್ಲಿ ಸಿಪಿಎಂ ಬಿಜೆಪಿಯ ಧ್ವನಿಯನ್ನು ಹೊಂದಿದೆ ಎಂದು ಪ್ರಿಯಾಂಕಾ ಹೇಳಿದರು. ಕಾಂಗ್ರೆಸ್ ಜನರನ್ನು ಚಿನ್ನವೆಂದು ನೋಡಿದರೆ, ಕೇರಳ ಮುಖ್ಯಮಂತ್ರಿ ವಿದೇಶಿ ಚಿನ್ನವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಪ್ರಿಯಾಂಕಾ ಅಪಹಾಸ್ಯ ಮಾಡಿದ್ದಾರೆ. ಇಎಂಸಿಸಿ ಒಪ್ಪಂದದ ಸುತ್ತಲಿನ ಆರೋಪಗಳನ್ನೂ ಅವರು ಗಮನ ಸೆಳೆದರು. ಚುನಾವಣಾ ಪ್ರಣಾಳಿಕೆಯಲ್ಲಿ ಯುಡಿಎಫ್ ನೀಡಿದ ಭರವಸೆಗಳನ್ನು ಪಟ್ಟಿ ಮಾಡಿದ ಪ್ರಿಯಾಂಕಾ, ಮಹಿಳೆಯರ ಸುರಕ್ಷತೆ ಅಂಶವನ್ನು ವಿವರಿಸಿದರು. ಕೇರಳದಲ್ಲಿ ಕಾಂಗ್ರೆಸ್ಸಿನ NYAY ಯೋಜನೆಯನ್ನು ಜಾರಿಗೆ ತರಲು ಯುಡಿಎಫ್ ಕೇರಳದ ಜನರಿಗೆ ಭರವಸೆ ನೀಡುತ್ತದೆ ಎಂದು ಅವರು ಅಭಯ ನೀಡಿದ್ದಾರೆ.
ನಕಲಿ ಮತ ತಡೆಯಲು ಆಯೋಗದ ಕ್ರಮ
ಏತನ್ಮಧ್ಯೆ, ನಕಲಿ ಮತಗಳನ್ನು ಸ್ಥಗಿತಗೊಳಿಸುವಂತೆ ಕೋರಿ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಅವರ ಮನವಿಗೆ ಹೈಕೋರ್ಟ್ ತೀರ್ಪು ನೀಡಲಿದೆ. ಅರ್ಜಿಯನ್ನು ನ್ಯಾಯಾಲಯ ಮಂಗಳವಾರ ಪರಿಗಣಿಸಿದಾಗ, ನಕಲಿ ಮತಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದರು.