ಗುಜರಾತ್ :ಗುಜರಾತಿನ ಸುರೇಂದ್ರನಗರ ಜಿಲ್ಲೆಯ ವಸ್ತಾಡಿ ಮತ್ತು ಚೂರ ಗ್ರಾಮಗಳ ನಡುವೆ ಸಂಪರ್ಕಿಸುವ ಸೇತುವೆ ಕುಸಿದಿದ್ದು, ಟಿಪ್ಪರ್ ಸಮೇತ ಎರಡು ಬೈಕ್ಗಳು ನದಿಗೆ ಬಿದ್ದಿವೆ. ನಾಲ್ಕಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಘಟನೆಯಿಂದಾಗಿ ಸ್ಥಳೀಯ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸೇತುವೆ 110 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಇದೀಗ ಕುಸಿತಗೊಂಡಿರುವುದರಿಂದ ಎಲ್ಲ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಸೇತುವೆ ಕುಸಿಯುವ ಮೊದಲು ಮರಳು ಲೋಡ್ ಮಾಡಿದ ಟಿಪ್ಪರ್ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಬಹುಭಾರದಿಂದ ಸೇತುವೆಯ ಒಂದು ಭಾಗ ಕುಸಿದಿದೆ. ಪರಿಣಾಮ ಟಿಪ್ಪರ್ ನೇರವಾಗಿ ನದಿಗೆ ಬಿದ್ದಿದೆ. ಈ ವೇಳೆ ಟಿಪ್ಪರ್ ಜೊತೆಗೆ ಸಂಚರಿಸುತ್ತಿದ್ದ ಎರಡು ಬೈಕ್ಗಳು ಕೂಡ ಬಿದ್ದಿವೆ. ಅಲ್ಲೇ ಇದ್ದ ಸ್ಥಳೀಯರು ಟಿಪ್ಪರ್ ಚಾಲಕ ಸೇರಿದಂತೆ ನಾಲ್ವರನ್ನು ರಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.