ಜಗಯ್ಯಾಪೇಟ (ಕೃಷ್ಣಾ ಜಿಲ್ಲೆ, ಆಂಧ್ರ ಪ್ರದೇಶ): ಸತ್ತು ಹೋಗಿದ್ದಾಳೆ ಎಂದುಕೊಂಡವಳು ಆಟೋ ಮಾಡಿಕೊಂಡು ಮನೆ ಮುಂದೆ ಬಂದು ಇಳಿದರೆ ಏನಾಗಬಹುದು? ಹೀಗಾದರೆ ಮನೆ ಮಂದಿಯ ಎದೆ ಝಲ್ ಎನ್ನದಿರುತ್ತದೆಯೇ?
ಹೌದು.. ಇಂಥದೊಂದು ಘಟನೆ ಜಗಯ್ಯಾ ಪೇಟೆಯ ಕ್ರಿಶ್ಚಿಯನ್ ಪೇಟ್ನಲ್ಲಿ ನಡೆದಿದೆ. ಗ್ರಾಮದ 75 ವರ್ಷದ ಜಯಮ್ಮ ಎಂಬುವರು ಕೊರೊನಾದಿಂದ ಮೃತಪಟ್ಟಿದ್ದರು. ಆದರೂ ಆಕೆ ಮರಳಿ ಮನೆಗೆ ಬಂದಿದ್ದನ್ನು ನೋಡಿ ಕುಟುಂಬಸ್ಥರು ಒಂದು ಕ್ಷಣ ಶಾಕ್ ಆಗಿದ್ದಾರೆ.
ಕೊರೊನಾದಿಂದ ಸತ್ತವಳು ಆಟೋದಲ್ಲಿ ಮನೆಗೆ ಬಂದಳು... ಆಗಿದ್ದೇನು?
ಕೊರೊನಾದಿಂದ ಸೋಂಕಿತರಾಗಿದ್ದ ಜಯಮ್ಮ ಎಂಬುವರನ್ನು ಏಪ್ರಿಲ್ ತಿಂಗಳು 12 ರಂದು ಚಿಕಿತ್ಸೆಗಾಗಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಏಪ್ರಿಲ್ 15 ರಿಂದ ಅವರು ಆಸ್ಪತ್ರೆಯಿಂದ ಕಾಣೆಯಾಗಿದ್ದರು. ಹೀಗಾಗಿ ಜಯಮ್ಮನ ಕುಟುಂಬದವರು ಆಕೆಗಾಗಿ ಆಸ್ಪತ್ರೆಯ ಶವಾಗಾರ ಸೇರಿದಂತೆ ಎಲ್ಲ ಕಡೆಯೂ ಹುಡುಕಾಡಿದ್ದರು. ಆದರೆ, ಶವಾಗಾರದಲ್ಲಿದ್ದ ಬೇರೊಬ್ಬ ಮಹಿಳೆಯ ಶವವನ್ನೇ ಜಯಮ್ಮನ ಶವವೆಂದು ತಿಳಿದು, ಜಗಯ್ಯಾ ಪೇಟೆಯಲ್ಲಿ ಆ ಶವದ ಅಂತ್ಯ ಸಂಸ್ಕಾರ ಮಾಡಿದ್ದರು.
ಆದರೆ, ವಿಧಿಯ ಆಟ ನೋಡಿ.. ಜಯಮ್ಮ ಮಾತ್ರ ಸತ್ತಿರಲಿಲ್ಲ. ಆಸ್ಪತ್ರೆಯಿಂದ ತಪ್ಪಿಸಿಕೊಂಡು ಅದೆಲ್ಲೋ ಇದ್ದ ಆಕೆ ಮನೆಗೆ ಬಂದಿದ್ದಾಳೆ. ನಿನ್ನೆಯಷ್ಟೇ ಮನೆಯಲ್ಲಿ ಈ ಮಹಿಳೆಯ ತಿಥಿ ಕಾರ್ಯವೂ ನೆರವೇರಿಸಲಾಗಿತ್ತು.
ಅತ್ತ ವಿಧಿ ತನ್ನ ಕ್ರೂರ ಆಟ ಮುಂದುವರೆಸಿದ್ದು, ಬದುಕಿ ಬಂದ ಮಹಿಳೆ ಜಯಮ್ಮನ ಮಗ ಮಾತ್ರ 10 ದಿನಗಳ ಹಿಂದೆ ಕೊರೊನಾಗೆ ಬಲಿಯಾಗಿದ್ದಾನೆ.