ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತೆ ತಮ್ಮ ಕೃತ್ಯವನ್ನು ನಡೆಸಿದ್ದಾರೆ. ಮಂಗಳವಾರ ರಾತ್ರೋರಾತ್ರಿ ಗುಂಡಿನ ದಾಳಿ ಮಾಡಿ, ಇಬ್ಬರು ಸ್ಥಳೀಯರಲ್ಲದ ಕಾರ್ಮಿಕರನ್ನು ಗಾಯಗೊಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲದ ನಿವಾಸಿಗಳಿಗೆ ಆತಂಕ ತಂದಿದೆ.
ಗುಂಡಿನ ದಾಳಿಗೆ ತುತ್ತಾದ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಗುಂಡು ತಿಂದ ಗಾಯಾಳುಗಳ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಉಗ್ರ ದಾಳಿ ನಡೆಸಿದವರ ಪತ್ತೆಗಾಗಿ ಪೊಲೀಸರು ಹುಡುಕಾಟ ರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಗಾಯಗೊಂಡವರನ್ನು ಮಹಾರಾಷ್ಟ್ರ ಮೂಲದ ಸೌರವ್ ಮತ್ತು ಅಕ್ಷಯ್ ಎಂದು ಗುರುತಿಸಲಾಗಿದೆ. ಜುಲೈ 13 ರಂದು ಶೋಪಿಯಾನ್ ಜಿಲ್ಲೆಯ ಗಗ್ರಾನ್ ಗ್ರಾಮದಲ್ಲಿ ಭಯೋತ್ಪಾದಕರು ಮೂವರು ಸ್ಥಳೀಯೇತರ ಕಾರ್ಮಿಕರನ್ನು ಗುಂಡಿಕ್ಕಿ ಗಾಯಗೊಳಿಸಿದ್ದರು. ಇದಾದ ಬೆನ್ನಲ್ಲೇ ಮತ್ತೊಂದು ದಾಳಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಉಗ್ರರ ಹೊಡೆದುರುಳಿಸಿದ ಸೇನೆ:ಇದೇ ವೇಳೆ ಜುಲೈ 16 ರಂದು ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯ ಪಕ್ಕದಲ್ಲಿರುವ ಕುಪ್ವಾರ ಜಿಲ್ಲೆಯ ಬಳಿ ಭದ್ರತಾ ಪಡೆ ಮತ್ತು ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 5 ಉಗ್ರರು ಹತರಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು.