ಮುಂಬೈ (ಮಹಾರಾಷ್ಟ್ರ) :ನಟಿ ರಶ್ಮಿಕಾ ಮಂದಣ್ಣ, ಸಾರಾ ತೆಂಡೂಲ್ಕರ್, ಸನ್ನಿ ಲಿಯೋನ್ ಸೇರಿದಂತೆ ಹಲವು ತಾರೆಯರನ್ನು ಬಾಧಿಸಿದ್ದ ಡೀಪ್‌ಫೇಕ್ ತಂತ್ರಜ್ಞಾನ ಈಗ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನೂ ಸುತ್ತಿಕೊಂಡಿದೆ. ಹಣ ಗಳಿಸುವ ಗೇಮ್ ಅಪ್ಲಿಕೇಶನ್ ಬಗ್ಗೆ ಅವರು ಮಾಹಿತಿ ನೀಡುತ್ತಿರುವಂತೆ ಜಾಹೀರಾತೊಂದನ್ನು ಚಿತ್ರಿಸಲಾಗಿದೆ. ಇದು ನಕಲಿ ವಿಡಿಯೋ ಎಂದು ಸ್ವತಃ ಸಚಿನ್ ಅವರೇ ಹೇಳಿಕೊಂಡಿದ್ದಾರೆ.
ಇದು ತಂತ್ರಜ್ಞಾನದ ಅತಿರೇಕದ ದುರ್ಬಳಕೆ. ಇದಕ್ಕೆ ಶೀಘ್ರವೇ ಕಡಿವಾಣ ಹಾಕಬೇಕಿದೆ. ಇಂತಹವುಗಳನ್ನು ಕಂಡಾಗ ಭಾರೀ ಬೇಸರವಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೋಮವಾರ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ನಕಲಿ ವಿಡಿಯೋ ಸಮೇತ ಮಾಹಿತಿ ಹಂಚಿಕೊಂಡಿರುವ ಅವರು, ಈ ವಿಡಿಯೋ ನಕಲಿಯಾಗಿದೆ. ತಂತ್ರಜ್ಞಾನದ ದುರ್ಬಳಕೆ ಆಗುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಈ ರೀತಿಯ ನಕಲಿ ವಿಡಿಯೋಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ. ಜೊತೆಗೆ ಇಂತಹ ಘಟನೆಗಳ ಬಳಿಕ ಸಾಮಾಜಿಕ ಮಾಧ್ಯಮಗಳು ಎಚ್ಚರಿಕೆ ಮತ್ತು ದೂರುಗಳಿಗೆ ಸ್ಪಂದಿಸುವ ಅಗತ್ಯವಿದೆ. ತಪ್ಪು ಮಾಹಿತಿ ಮತ್ತು ಡೀಪ್‌ಫೇಕ್‌ಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ತೆಂಡೂಲ್ಕರ್ ಅವರು ನಕಲಿ ವಿಡಿಯೋವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಮಹಾರಾಷ್ಟ್ರ ಸೈಬರ್ ಕ್ರೈಮ್ಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೂ ಮೊದಲು ತೆಂಡೂಲ್ಕರ್ ಅವರಿಗೆ ಡೀಪ್‌ಫೇಕ್ ಬಿಸಿ ತಟ್ಟಿತ್ತು.