ಹೈದರಾಬಾದ್ : ತೆಲಂಗಾಣದಲ್ಲಿ 20 ವರ್ಷಗಳ ಬಳಿಕ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ನೇತೃತ್ವದ ಬಿಆರ್ಎಸ್ ರಾಜ್ಯದ ಒಟ್ಟು 119 ಸ್ಥಾನಗಳ ಪೈಕಿ 115 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಕಮ್ಯುನಿಸ್ಟ್ ಪಕ್ಷಗಳು ತಮ್ಮೊಂದಿಗೆ ಮೈತ್ರಿಗೆ ಬರಬಹುದು ಎಂಬ ಕೆಸಿಆರ್ ನಿರೀಕ್ಷೆ ಇದರೊಂದಿಗೆ ಹುಸಿಯಾಗಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಮುನುಗೋಡ್ ಉಪಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳು ಬಿಆರ್ ಎಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದವು. ತಮ್ಮ ಪಕ್ಷದ ವಿಜಯದ ನಂತರ, ರಾವ್ ಅವರು ಸಿಪಿಐ ಮತ್ತು ಸಿಪಿಎಂಗೆ ಧನ್ಯವಾದ ಹೇಳಿದ್ದರು ಮತ್ತು ತಮ್ಮ ಈ ಮೈತ್ರಿ ಮುಂದುವರಿಯಲಿದೆ ಎಂದಿದ್ದರು. ರಾಜ್ಯದಲ್ಲಿ ಬೆಳೆಯುತ್ತಿರುವ ಬಿಜೆಪಿಯನ್ನು ಹತ್ತಿಕ್ಕಲು ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಕೆಸಿಆರ್ ಅವರ ಉದ್ದೇಶವಾಗಿತ್ತು.
ಇದೇ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ತೆಲಂಗಾಣದ ಸಿಪಿಎಂ ಕಾರ್ಯದರ್ಶಿ ತಮ್ಮಿನೇನಿ ವೀರಭದ್ರಂ ಅವರ ಪ್ರಕಾರ, ಕಾಂಗ್ರೆಸ್ ಮತ್ತು ಸಿಪಿಎಂ, ಸಿಪಿಐ ಮೈತ್ರಿಯ ಬಗ್ಗೆ ಚರ್ಚಿಸಲು ತೆಲಂಗಾಣದ ಕಾಂಗ್ರೆಸ್ ಉಸ್ತುವಾರಿ ಮಾಣಿಕ್ ರಾವ್ ಠಾಕರೆ ಅವರಿಂದ ಪಕ್ಷಕ್ಕೆ ಕರೆ ಬಂದಿದೆ. ಆದಾಗ್ಯೂ, ಔಪಚಾರಿಕ ಸುತ್ತಿನ ಮಾತುಕತೆ ಇನ್ನೂ ನಡೆದಿಲ್ಲ.