ಹೈದರಾಬಾದ್(ತೆಲಂಗಾಣ) :ರಿಸ್ಕ್ ಜಾಬ್ ಆದ ಲೈನ್‌ಮನ್ ಕೆಲಸಕ್ಕೆ ಪುರುಷರೇ ಹಿಂದೇಟು ಹಾಕಬೇಕಾದರೆ, ತೆಲಂಗಾಣದ ಯುವತಿಯೊಬ್ಬಳು ಸರಸರನೇ ಕಂಬ ಹತ್ತಿ ವಿದ್ಯುತ್ ಸಂಪರ್ಕ ದುರಸ್ತಿ ಮಾಡುವುದನ್ನು ಕಲಿತು ಜೂನಿಯರ್ ಲೈನ್‌ಮೆನ್ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿಯೇ ಮೊದಲ ಲೈನ್ ವುಮೆನ್ ಎನಿಸಿಕೊಂಡಿದ್ದಾರೆ.
ಸಿದ್ದಿಪೇಟೆ ಜಿಲ್ಲೆಯ ಗಣೇಶಪಲ್ಲಿ ಗ್ರಾಮದ ಸಿರಿಶಾ ತೆಲಂಗಾಣ ರಾಜ್ಯ ಸದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (ಟಿಎಸ್‌ಎಸ್‌ಪಿಡಿಸಿಎಲ್) ನಡೆಸಿದ ಲೈನ್ಮನ್ಗಳ ಆಯ್ಕೆಯಲ್ಲಿ ಜೂನಿಯರ್ ಲೈನ್‌ಮೆನ್ ಹುದ್ದೆ ಪಡೆದುಕೊಂಡವರು. ಆಯ್ಕೆಯ ವೇಳೆ ಸಿರಿಶಾ ಅವರು ಕಂಬವನ್ನು ಸುಲಲಿತವಾಗಿ ಹತ್ತಿ, ಇಳಿಯುವುದನ್ನು ಕಲಿತಿದ್ದು, ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇಂಧನ ಸಚಿವ ಜಗದೀಶ್ ರೆಡ್ಡಿ ಅವರು ಮೊದಲ ಲೈನ್ ವುಮೆನ್ ಸಿರಿಶಾಗೆ ನೇಮಕಾತಿ ಪತ್ರ ವಿತರಿಸಿದರು.