ಹೈದರಾಬಾದ್ (ತೆಲಂಗಾಣ):ತೆಲಂಗಾಣ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ನಾಮಪತ್ರ ಸಲ್ಲಿಕೆ ಭರಾಟೆ ಶುಕ್ರವಾರಕ್ಕೆ ಮುಕ್ತಾಯವಾಗಿದೆ. ಕೋಟ್ಯಾಧಿಪತಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಕಾರ್ಪೊರೇಟ್ ಕಾಲೇಜು ಮಾಲೀಕರು ಸೇರಿದಂತೆ ಹಲವು ಉದ್ಯಮಿಗಳು ವಿವಿಧ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಪಂಚ ರಾಜ್ಯಗಳ ಚುನಾವಣಾ ಪೈಕಿ 119 ಸದಸ್ಯ ಬಲದ ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಬಿಆರ್ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ಪರವಾಗಿ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವುದಾಗಿ ಎಂದು ಹೇಳಿಕೊಂಡಿದ್ದಾರೆ.
600 ಕೋಟಿ, 400 ಕೋಟಿ, 200 ಕೋಟಿ, 100 ಕೋಟಿ... ಹೀಗೆ ಒಬ್ಬೊಬ್ಬ ಅಭ್ಯರ್ಥಿ ಕೂಡ ತಮ್ಮ ಆಸ್ತಿಯನ್ನು ಬಹಿರಂಗ ಪಡಿಸಿದ್ದಾರೆ. ಎಲ್ಲ ಪಕ್ಷಗಳ ಸೇರಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ 50 ಕೋಟಿಗೂ ಅಧಿಕ ಆಸ್ತಿಯನ್ನು ತೋರಿಸಿದ್ದಾರೆ. ಕೆಲವು ಅಭ್ಯರ್ಥಿಗಳ ಆಸ್ತಿಯಲ್ಲಿ ಸಿಂಹಪಾಲು ಅವರ ಪತ್ನಿಯರ ಹೆಸರಿನಲ್ಲಿದೆ. ಕೆಲವರು ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಅಥವಾ ಮನೆ ಇಲ್ಲ ಎಂದು ಘೋಷಿಸಿದ್ದಾರೆ.
ಮತ್ತೊಂದೆಡೆ, ಕೊಡಂಗಲ್ ಹಾಗೂ ಕಾಮರೆಡ್ಡಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ತಮ್ಮ ವಿರುದ್ಧ 89 ಪ್ರಕರಣಗಳು ದಾಖಲಾಗಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಗೋಶಾಮಹಲ್ ಬಿಜೆಪಿ ಅಭ್ಯರ್ಥಿ ರಾಜಾಸಿಂಗ್ ತಮ್ಮ ವಿರುದ್ಧ 75 ಪ್ರಕರಣಗಳು ದಾಖಲಾಗಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಆಡಳಿತ ಪಕ್ಷದ ಕೆಲ ಸದಸ್ಯರ ಮೇಲಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.