ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲದಂತೆ ಕೆಸಿಆರ್ ತಂತ್ರ ಎಂದ ತೆಲಂಗಾಣದ ರೇವಂತ್ ರೆಡ್ಡಿ: ಹೆಚ್ಡಿಕೆ ಪ್ರತಿಕ್ರಿಯೆ ಏನು? ಹೈದರಾಬಾದ್/ವಿಜಯಪುರ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಇದು ಈಗಾಗಲೇ ದೇಶದ ಗಮನ ಸೆಳೆಯುತ್ತಿದೆ. ಇದರ ನಡುವೆ ತೆಲಂಗಾಣದಲ್ಲಿ ಕರ್ನಾಟಕ ಚುನಾವಣಾ ರಾಜಕೀಯ ವಿಷಯ ಸದ್ದು ಮಾಡಿದೆ. ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಂತೆ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಷಡ್ಯಂತ್ರ ಆರಂಭಿಸಿದ್ದಾರೆ ಎಂದು ಸ್ವತಃ ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರೇವಂತ್ ರೆಡ್ಡಿ, ಕರ್ನಾಟಕ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ತೆಲಂಗಾಣದ ಖಮ್ಮಂನಲ್ಲಿ ನಡೆದ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷದ ಸಭೆಯಲ್ಲಿ ಪ್ರಮುಖವಾದ ವ್ಯಕ್ತಿ ಕಾಣಲಿಲ್ಲ. ಅವರೇ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ. ಬಿಆರ್ಎಸ್ ಸಭೆಗೆ ಕುಮಾರಸ್ವಾಮಿ, ದೇವೇಗೌಡರು ಯಾಕೆ ಬರಲಿಲ್ಲ ಎಂದು ಕೆಸಿಆರ್ ಹೇಳಲಿ ನೋಡೋಣ. ಇಲ್ಲವೇ, ನಾನು ಹೇಳುತ್ತಿರುವುದನ್ನು ಕೆಸಿಆರ್ ಖಂಡಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಬಹುಮತ:ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. 120-130 ಸ್ಥಾನಗಳಿಂದ ಗೆಲುವು ಸಾಧಿಸಲಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ. ಈ ವರದಿಗಳನ್ನು ಕಾಂಗ್ರೆಸ್ ಚುನಾವಣಾ ನಿಪುಣರಾದ ಸುನೀಲ್ ಕಣಗೋಲು ಕಚೇರಿ ಮೇಲೆ ಕೆಸಿಆರ್ ದಾಳಿ ಮಾಡಿಸಿ ತರಿಸಿಕೊಂಡಿದ್ದಾರೆ ಎಂದೂ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.
ಕಡಿಮೆ ಅಂತರದಿಂದ ಗೆಲ್ಲುವ ಕ್ಷೇತ್ರಗಳ ಟಾರ್ಗೆಟ್: ’’ಕರ್ನಾಟಕ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆಲ್ಲುವ ಕ್ಷೇತ್ರಗಳು ಎಂದರೆ 1 ಸಾವಿರದಿಂದ 3 ಸಾವಿರದ ಅಂತರದೊಳಗೆ ಜಯ ಸಾಧಿಸುವ 25-30 ಕ್ಷೇತ್ರಗಳನ್ನು ಕೆಸಿಆರ್ ಗುರಿಯಾಗಿಸಿಕೊಂಡಿದ್ದಾರೆ. ಪ್ರಮುಖವಾಗಿ ಬಳ್ಳಾರಿ, ರಾಯಚೂರು, ಕಲಬುರಗಿ ಪ್ರದೇಶದ ಕ್ಷೇತ್ರಗಳ ಬಗ್ಗೆ ಪರಿಶೀಲನೆ ನಡೆಸಿ, ಕಾಂಗ್ರೆಸ್ನ ಪ್ರಮುಖ ನಾಯಕರನ್ನು ಕರೆಸಿಕೊಂಡು ಕೆಸಿಆರ್, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲದಂತೆ ತಂತ್ರ ರೂಪಿಸಿದ್ದಾರೆ’’ ಎಂದು ರೇವಂತ್ ರೆಡ್ಡಿ ದೂರಿದ್ದಾರೆ.
ಅಲ್ಲದೇ, ’’ಇದಕ್ಕಾಗಿ ಕೆಸಿಆರ್ 500 ಕೋಟಿ ರೂಪಾಯಿಗಳ ಆಫರ್ ಕೊಟ್ಟಿರುವುದು ನಿಜವೋ, ಅಲ್ಲವೋ ಎಂದೂ ಪ್ರಶ್ನಿಸಿದ ರೇವಂತ್ ರೆಡ್ಡಿ, ಕಾಂಗ್ರೆಸ್ ಗೆದ್ದರೆ ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟವಾಗುತ್ತಿದೆ. ಇದರಿಂದ ಕೆಸಿಆರ್ ಅವರಿಗೆ ಆಗುವ ಕಷ್ಟವೇನು?. ಆದರೆ, ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಗೆಲುವನ್ನು 100 ಸ್ಥಾನಗಳಿಗೆ ಸಿಮೀತಗೊಳಿಸಬೇಕೆಂದು ನಮ್ಮ ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕರಿಗೆ ಚಂದ್ರಶೇಖರ್ ರಾವ್ ಈ ಆಪರೇಷನ್ ಮಾಡಿದ್ದಾರೆ. ಈ ವಿಷಯ ಕುಮಾರಸ್ವಾಮಿಯವರಿಗೂ ತಿಳಿದಿರಲಿಲ್ಲ. ಇದೇ ಖಮ್ಮಂನಲ್ಲಿ ನಡೆದ ಸಭೆಗೆ ಕುಮಾರಸ್ವಾಮಿ ಬರದೇ ಇರಲು ಕಾರಣ‘‘ ಎಂದುತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿಆರೋಪಿಸಿದ್ದಾರೆ
ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?: ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರ ಈ ಆರೋಪಗಳ ಬಗ್ಗೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಯಾರು ಭೇಟಿಯಾಗಿದ್ದರೂ ನನಗೆ ಗೊತ್ತಿಲ್ಲ. ಯಾರು ಯಾರನ್ನು ಬೇಕಾದರೂ ಭೇಟಿಯಾಗಬಹುದು. ಇದರಲ್ಲಿ ಏನು ತಪ್ಪು ಎಂದು ಪ್ರಶ್ನಿಸಿದರು.
ಇದೇ ವೇಳೆ, ’’ಕಾಂಗ್ರೆಸ್ ಗೆಲ್ಲದಂತೆ ನೋಡಿಕೊಳ್ಳಲು 500 ಕೋಟಿ ರೂಪಾಯಿಗಳ ಆಫರ್ ಬಗ್ಗೆಯೂ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಸೋಲಿಸಲು ಯಾರು ಸುಫಾರಿ ಕೊಟ್ಟಿದ್ದಾರೆ?. ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರು ಇರಿಸುವುದರಿಂದ ಅವರಿಗೆ ಏನು ಸಿಗುತ್ತದೆಯೇ?. ಕೆಎಸ್ಆರ್ ಹೋರಾಟ ಇರುವುದು ಕಾಂಗ್ರೆಸ್ ವಿರುದ್ಧವಲ್ಲ. ಬಿಜೆಪಿ ಕೆಸಿಆರ್ ಅವರ ಟಾರ್ಗೆಟ್ ಆಗಿದೆ. ಕಾಂಗ್ರೆಸ್ ಕರ್ನಾಟಕದಲ್ಲಿ ಸೋಲಿಸಲು ಸುಫಾರಿ ನೀಡಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ. ಇದು ನನಗಂತೂ ಗೊತ್ತಿಲ್ಲ. ನನಗೆ ಹಣದ ವಿಚಾರವೂ ಗೊತ್ತಿಲ್ಲ. ಯಾರು ಹೇಳಿದ್ದರೋ ಅವರನ್ನೇ ಕೇಳಿ‘‘ ಎಂದು ಹೆಚ್ಡಿ ಕುಮಾರಸ್ವಾಮಿಹೇಳಿದ್ದಾರೆ
ಇದನ್ನೂ ಓದಿ:2023ರ ರಾಜ್ಯ ಚುನಾವಣೆ ಗಾಂಧಿ - ಗೋಡ್ಸೆ ಸಿದ್ದಾಂತದ ನಡುವಿನ ಹೋರಾಟ: ಬಿ ಕೆ ಹರಿಪ್ರಸಾದ್