ಅಹಮದಾಬಾದ್: 2002ರ ಗುಜರಾತ್ ಧಂಗೆ ಹಿಂದೆ ಅಹ್ಮದ್ ಪಟೇಲ್ ಕೈವಾಡವಿದೆ ಎಂದು ಎಸ್‌ಐಟಿ ತಂಡ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದೆ. ಗುಜರಾತ್ ಗಲಭೆ ಮೂಲಕ ನರೇಂದ್ರ ಮೋದಿ ಅವರನ್ನು ಸಿಲುಕಿಸಲು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮಾಜಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್.ಬಿ ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಅವರ ಅಂದಿನ ರಾಜಕೀಯ ಸಲಹೆಗಾರ ದಿ. ಅಹ್ಮದ್ ಪಟೇಲ್ ಅವರಿಂದ 30 ಲಕ್ಷ ರೂ. ಹಣ ಪಡೆದಿದ್ದರು. ಗಲಭೆ ಸೃಷ್ಟಿಸಲು ಯೋಜನೆ ರೂಪಿಸಿದ್ದರು.
2002ರ ಗುಜರಾತ್ ಧಂಗೆಯ ನಂತರದ ಪರಿಣಾಮಗಳು ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಅಸ್ಥಿರಗೊಳಿಸಿತು. ಅಂದಿನ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವುದೇ, ಇದರಲ್ಲಿ ಅಮಾಯಕರನ್ನು ಸಿಲುಕಿಸುವುದೇ ಗಲಭೆಯ ಉದ್ದೇಶವಾಗಿತ್ತು ಎಂದು ವಿಶೇಷ ತನಿಖಾ ತಂಡ (SIT) ವರದಿ ಬಹಿರಂಗಪಡಿಸಿದೆ.
2002ರ ಗುಜರಾತ್ ಧಂಗೆ - ಕ್ರಿಮಿನಲ್ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ತಂಡ ರಚಿಸಲಾಗಿದೆ. ತೀಸ್ತಾ, ಶ್ರೀಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಮಿತೇಶ್ ಅಮೀನ್ ಮತ್ತು ಅಮಿತ್ ಪಟೇಲ್, ಎಸ್‌ಐಟಿಯ ಎಸಿಪಿ ಬಿ.ಸಿ.ಸೋಲಂಕಿ ಅವರು ಅಫಿಡವಿಟ್ ಸಲ್ಲಿಸಿದ್ದು, ಆರೋಪಿಗಳು ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಇದು ಪ್ರಾಯೋಜಿತ ಪಿತೂರಿ ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ.ಡಿ ಠಕ್ಕರ್ ಅವರು ಎಸ್‌ಐಟಿ ಮಾಹಿತಿಯನ್ನು ದಾಖಲಿಸಿಕೊಂಡು ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಇನ್ನು ಅಹಮದಾಬಾದ್ ಮೆಟ್ರೋಪಾಲಿಟನ್ ನ್ಯಾಯಾಲಯವು ಜುಲೈ 2ರಂದು ಸೆಟಲ್ವಾಡ್ ಮತ್ತು ಶ್ರೀಕುಮಾರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.