ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕರ್ನಾಟಕದ ಮೇಕೆದಾಟು ಯೋಜನೆ, ತಮಿಳುನಾಡು ವಿದ್ಯಾರ್ಥಿಗಳಿಗೆ ನೀಟ್ನಿಂದ ವಿನಾಯ್ತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಪ್ರಧಾನಿ ಭೇಟಿ ಮಾಡಿದ ಸಿಎಂ ಸ್ಟಾಲಿನ್: ಮೇಕೆದಾಟು ಯೋಜನೆಗೆ ಅನುಮೋದನೆ ನೀಡದಂತೆ ಮನವಿ - ಮೇಕೆದಾಟು ಯೋಜನೆ
ಮೇಕೆದಾಟು ವಿಚಾರವಾಗಿ ಕರ್ನಾಟಕ-ತಮಿಳುನಾಡಿನ ಮಧ್ಯೆ ಮುಸುಕಿನ ಗುದ್ದಾಟ ಮುಂದುವರೆದಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿದ್ದು, ಈ ಯೋಜನೆಗೆ ಅನುಮೋದನೆ ನೀಡದಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಕುಡಿಯುವ ನೀರಿನ ಯೋಜನೆ ಮೇಕೆದಾಟು ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಅನುಮತಿ ನೀಡದಂತೆ ಪ್ರಧಾನಿ ಮೋದಿ ಬಳಿ ಸ್ಟಾಲುನ್ ಮನವಿ ಮಾಡಿದ್ದು, ಕರ್ನಾಟಕದ ನಿರ್ಧಾರ 2018ರ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಎಂದು ತಿಳಿಸಿದ್ದಾರೆ. ಮೇಕೆದಾಟು ಯೋಜನೆಯಿಂದಾಗಿ ತಮಿಳುನಾಡಿನ ರೈತರು ತೊಂದರೆಗೊಳಗಾಗಲಿದ್ದು, ನೀರಿನ ಸಮಸ್ಯೆ ಎದುರಿಸಲಿದ್ದಾರೆಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದರ ಜೊತೆಗೆ ಶ್ರೀಲಂಕಾದಲ್ಲಿ ತಮಿಳರು ಎದುರಿಸುತ್ತಿರುವ ಸಮಸ್ಯೆ, ವಿದ್ಯಾರ್ಥಿಗಳಿಗೆ ನೀಟ್ನಿಂದ ವಿನಾಯ್ತಿ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಮೇಕೆದಾಟು ಯೋಜನೆಗೋಸ್ಕರ ರಾಜ್ಯ ಬಜೆಟ್ನಲ್ಲಿ ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇದರ ವಿರುದ್ಧ ತಮಿಳುನಾಡು ಸರ್ಕಾರ ಖಂಡನಾ ನಿರ್ಣಯ ಕೈಗೊಂಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕರ್ನಾಟಕ ಕೂಡ ಮೇಕೆದಾಟು ಯೋಜನೆ ಜಾರಿಗೋಸ್ಕರ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಮಾಡಲಾಗಿದೆ. ಜೊತೆಗೆ ಸರ್ವಪಕ್ಷ ಸಭೆ ನಡೆಸಿರುವ ಬಸವರಾಜ ಬೊಮ್ಮಾಯಿ ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗ ದೆಹಲಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ.