ಚೆನ್ನೈ:ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಡಿಎಂಕೆ ಪಕ್ಷ ಇಂದು ನೂತನ ಸಂಪುಟ ರಚಿಸಿದೆ. ವಿಶೇಷವೆಂದರೆ ರಾಜ್ಯದ ಸಂಪುಟ ಸ್ಟಾಲಿನ್, ಗಾಂಧಿ ಮತ್ತು ನೆಹರೂ ಅವರಿಂದ ಕೂಡಿದೆ.
ಸೋವಿಯತ್ ಒಕ್ಕೂಟದ ನಾಯಕ ದಿ.ಜೋಸೆಫ್ ಸ್ಟಾಲಿನ್ ಅವರ ಹೆಸರಿನ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಇತರ 33 ಸಂಪುಟ ಸಚಿವರೊಂದಿಗೆ ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ: ದಶಕದ ಬಳಿಕ ತಮಿಳುನಾಡು ಗದ್ದುಗೆ ಏರಿದ ಡಿಎಂಕೆ: ಸಿಎಂ ಆಗಿ ಎಂ.ಕೆ.ಸ್ಟಾಲಿನ್ ಪ್ರಮಾಣ
ಸ್ವಾತಂತ್ರ್ಯ ಹೋರಾಟಗಾರ, ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಹೆಸರುಳ್ಳ ತಿರುಚಿರಾಪಳ್ಳಿ ಮೂಲದ ಡಿಎಂಕೆ ಪ್ರಬಲ ನಾಯಕ ಮತ್ತು ಮಾಜಿ ಸಚಿವ ಕೆ.ಎನ್. ನೆಹರೂ ಅವರು ಪುರಸಭೆ ಆಡಳಿತ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಭಾರತದ ಪಿತಾಮಹ ಮಹಾತ್ಮ ಗಾಂಧಿಯ ಹೆಸರಿನಂತೆ ಆರ್.ಗಾಂಧಿ ಅವರು ಕೈಮಗ್ಗ ಮತ್ತು ಜವಳಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಸ್ಟಾಲಿನ್-ನೆಹರೂ-ಗಾಂಧಿ ಹೆಸರಿನ ಈ ಮೂವರು ತಮಿಳುನಾಡು ನೂತನ ಸಂಪುಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಏಪ್ರಿಲ್ 6 ರಂದು ಜರುಗಿದ್ದ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ10 ವರ್ಷಗಳ ಕಾಲ ಪ್ರತಿಪಕ್ಷದಲ್ಲಿದ್ದ ಡಿಎಂಕೆ, 234 ಸ್ಥಾನಗಳ ಪೈಕಿ 157 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು.