ತಮಿಳುನಾಡು:ಇಷ್ಟು ದಿನ ಜೊತೆಗಿದ್ದು ಒಮ್ಮೆಲೇ ತನ್ನಿಂದ ಶಾಶ್ವತವಾಗಿ ದೂರಾಗುತ್ತಿರುವ ವೇದನೆ. ನಿನ್ನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ನೋವು. ಅಯ್ಯೋ ವಿಧಿಯೇ ನೀನೇಕಿಷ್ಟು ಕ್ರೂರಿ... ಬಹುದಿನಗಳಿಂದ ಜೊತೆಗಿದ್ದ ಒಡನಾಡಿ ಇನ್ನಿಲ್ಲ ಎಂಬ ಘೋರ ಸತ್ಯ ಅರಗಿಸಿಕೊಳ್ಳಲಾಗುತ್ತಿಲ್ಲ. ಆತನ ಕಣ್ಣಂಚಲಿ ನೀರು ಉಮ್ಮಳಿಸಿ ಬರುತ್ತಿತ್ತು. ಆ ದೃಶ್ಯವನ್ನು ನೋಡಿದಾಗ ಎಂಥವರೂ ಒಂದು ಕ್ಷಣ ಭಾವುಕರಾಗುತ್ತಾರೆ.
ವಿಧಿಯಾಟವನ್ನು ಬೈಯುವುದು ಬಿಟ್ಟರೆ, ಬೇರೆ ಮಾತುಗಳು ನಾಲಗೆಯಲ್ಲಿ ಹೊರಳುತ್ತಿಲ್ಲ. ನಿನಗೆ ಈ ಸ್ಥಿತಿ ತಂದ ದುಷ್ಕರ್ಮಿಗಳನ್ನು ಶಪಿಸುವುದೇ, ಏನು ಮಾಡಲಿ ಎಂಬ ಪ್ರಶ್ನೆಗಳು? ಪಂಚಭೂತಗಳಲ್ಲಿ ವಿಲೀನವಾದ ನೀನು ಮರಳಿ ಬರುವುದಿಲ್ಲ ಎಂಬ ನೋವು ಈ ಜನ್ಮದಲ್ಲಿ ಅಂತ್ಯ ಕಾಣದು. ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದ ಗಜರಾಜನ ಸಾವಿಗೆ ವಲಯ ಸಂರಕ್ಷಣಾಧಿಕಾರಿ ಕಣ್ಣೀರ ವಿದಾಯ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲ್ಲು ಹೃದಯವೂ ಕರಗುವ ದೃಶ್ಯ ಸೆರೆಯಾಗಿರುವುದು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅಭಯಾರಣ್ಯದ ಸಡಿವಯಾಲ್ ಆನೆ ಶಿಬಿರದಲ್ಲಿ.
ಕಿಡಿಗೇಡಿಗಳ ದಾಳಿಗೆ ಒಳಗಾಗಿ ತೀವ್ರ ಗಾಯಗೊಂಡಿದ್ದ ಆನೆಯೊಂದನ್ನು ಈ ಶಿಬಿರಕ್ಕೆ ತರಲಾಗಿತ್ತು. ಇಲ್ಲಿನ ವಲಯ ಸಂರಕ್ಷಣಾಧಿಕಾರಿ ತನ್ನ ಕುಟುಂಬದ ಸದಸ್ಯನಂತೆ ಆನೆಯನ್ನು ಆರೈಕೆ ಮಾಡುತ್ತಿದ್ದರು. ಒಡನಾಡಿ ನನ್ನಿಂದ ದೂರಾಗಬಾರದೆಂದು ಹಗಲಿರುಳು ಶ್ರಮಿಸಿದ್ದರು. ಆದರೆ, ಆತನ ಸರ್ವ ಪ್ರಯತ್ನಕ್ಕೆ ಫ್ರತಿಫಲ ದೊರೆಯಲೇ ಇಲ್ಲ. ಈ ಆಘಾತದ ಸುದ್ದಿ ಕೇಳಿದ ಅಧಿಕಾರಿಗೆ ಹೃದಯ ಚೂರಾಗುವಂತೆ ಮಾಡಿತು.
ವಿಡಿಯೋದಲ್ಲಿ ಏನಿದೆ?:ಅಗಲಿರುವ ಆನೆಯ ಸೊಂಡಿಲಿಗೆ ಅಧಿಕಾರಿ ಆತನ ಹಣೆಯನ್ನಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಗೆಳೆಯ ನನ್ನನ್ನು ಬಿಟ್ಟು ಹೋಗಿದ್ಯಾಕೆ ಎಂದು ಕಣ್ಣೀರು ಸುರಿಸುತ್ತಿದ್ದಾರೆ. ಮೂಕ ಪ್ರಾಣಿಯ ಮೂಕ ರೋದನೆ ಕಿಡಿಗೇಡಿಗಳಿಗೆ ಕಾಣಿಸಲಿಲ್ಲವೇ? ಈ ಮನಕಲಕುವ ದೃಶ್ಯವನ್ನು ನೋಡಿ ಕಲ್ಲು ಹೃದಯದ ವ್ಯಕ್ತಿಯ ಕಣ್ಣುಗಳು ಒಮ್ಮೆಲೆಗೆ ಒದ್ದೆಯಾಗುತ್ತವೆ.
ಭಾರತೀಯ ಅರಣ್ಯ ಸೇವಾ ಸಂಘವೂ ಈ ತುಣುಕನ್ನು ಹಂಚಿಕೊಂಡು ಹೀಗೆ ಬರೆದಿದೆ. ಕೆಲವು ಭಾವನೆಗಳು ಪದಗಳಿಗೆ ನಿಲುಕದ್ದು ಎಂದು ಹೇಳಿದೆ. 'ನೀವು ಅತ್ಯುತ್ತಮ ಪ್ರಯತ್ನವನ್ನೇ ಮಾಡಿದ್ದೀರಾ? ಅದನ್ನು ಎಂದಿಗೂ ಭಾವನೆಗಳ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ' ಎಂದು ಟ್ವಿಟರ್ನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.