ನಾಗಪಟ್ಟಿಣಂ (ತಮಿಳುನಾಡು): ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಶುಕ್ರವಾರ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸಿಎಂ ಉಪಹಾರ ಯೋಜನೆಯ (breakfast scheme) ಎರಡನೇ ಹಂತಕ್ಕೆ ಚಾಲನೆ ನೀಡಿದರು. ನಾಗಪಟ್ಟಿಣಂ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ತಿರುಕ್ಕುವಲೈನ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ನ ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸಿದರು. ಬಳಿಕ ಮಕ್ಕಳಿಗೆ ಚಾಕಲೇಟ್ ವಿತರಿಸಿದರು.
ಬಳಿಕ ಮಾತನಾಡಿದ ಸಿಎಂ ಸ್ಟಾಲಿನ್, "ಇಂದು ಅತ್ಯುತ್ತಮ ದಿನ ಎಂದು ನಾನು ನಂಬುತ್ತೇನೆ. ಈ ಉಪಹಾರ ಯೋಜನೆಯನ್ನು ಇಲ್ಲಿ ಪರಿಚಯಿಸಲು ತುಂಬಾ ಹೆಮ್ಮೆ ಪಡುತ್ತೇನೆ. ದಿವಂಗತ ಕರುಣಾನಿಧಿ (ತಮಿಳುನಾಡು ಮಾಜಿ ಮುಖ್ಯಮಂತ್ರಿ) ಅವರು ಸಾಕಷ್ಟು ಯೋಜನೆಗಳನ್ನು ತಿರುಕ್ಕುವಲೈ ಜನರಿಗೆ ಪರಿಚಯಿಸಿದ್ದಾರೆ ಮತ್ತು ನೀವು ಅದರ ಪ್ರಯೋಜನ ಪಡೆದುಕೊಂಡಿದ್ದೀರಿ. ಕರುಣಾನಿಧಿ ಅವರ ಪುತ್ರನಾಗಿ ಈ ಯೋಜನೆಯನ್ನು ಇಲ್ಲಿ ಪ್ರಾರಂಭಿಸಿಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ" ಎಂದು ಹೇಳಿದರು.
ಹಸಿವು ಶಿಕ್ಷಣಕ್ಕೆ ತೊಡಕಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. "ಶಿಕ್ಷಣಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ. ಅದನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನ ಹರಿಸಬೇಕು. ಹಸಿವಿನಿಂದ ಯಾರೂ ವಿದ್ಯಾಭ್ಯಾಸ ತಪ್ಪಿಸಿಕೊಳ್ಳಬಾರದು. ಅದಕ್ಕಾಗಿಯೇ ನಮ್ಮ ಸರ್ಕಾರ ಈ ಯೋಜನೆಗೆ ಹಣ ಮಂಜೂರು ಮಾಡಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಇದು ಖಂಡಿತ ಪ್ರಯೋಜನಕಾರಿಯಾಗಿದೆ" ಎಂದರು.
ನಿಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳಿ- ಮನವಿ:ಬಳಿಕ ಶಾಲೆಯ ಅಧಿಕಾರಿಗಳು ಮತ್ತು ಅಡುಗೆ ತಯಾರಿಸುವವರಲ್ಲಿ, ನಿಮ್ಮ ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳುತ್ತೀರೋ, ಹಾಗೆಯೇ ಶಾಲಾ ಮಕ್ಕಳನ್ನು ನೋಡಿಕೊಳ್ಳಿ ಎಂದು ಸಿಎಂ ಮನವಿ ಮಾಡಿದರು. "ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ, ನೀಟ್ ಹೆಸರಲ್ಲಿ ಶಿಕ್ಷಣಕ್ಕೆ ಅಡ್ಡಗಾಲು ಹಾಕುವ ವಿಶ್ವಾಸಘಾತುಕ ಆಡಳಿತಗಾರರಿದ್ದಾರೆ. ಶಾಲೆಯ ಅಧಿಕಾರಿಗಳು ಮತ್ತು ಅಡುಗೆ ತಯಾರಿಸುವವರಲ್ಲಿ ವಿನಮ್ರ ವಿನಂತಿ. ನೀವು ಮನೆಯಲ್ಲಿ ನಿಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೀರೋ, ಹಾಗೆಯೇ ಇಲ್ಲಿನ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕು" ಎಂದು ಕೇಳಿಕೊಂಡರು.