ಕರ್ನಾಟಕ

karnataka

ETV Bharat / bharat

ವಿವಾದಿತ ಬಿಬಿಸಿ ಡಾಕ್ಯುಮೆಂಟರಿ ನಿರ್ಬಂಧಿಸಲು ಯೂಟ್ಯೂಬ್, ಟ್ವಿಟರ್​ಗೆ ಕೇಂದ್ರ ಆದೇಶ - ಇಂಡಿಯಾ ದಿ ಮೋದಿ ಕ್ವೆಶ್ಚನ್

ಗೋಧ್ರೋತ್ತರ ಗಲಭೆಯ ಕುರಿತಾದ ಬಿಬಿಸಿ ಡಾಕ್ಯುಮೆಂಟರಿ ನಿರ್ಬಂಧಿಸಲು ಕೇಂದ್ರ ಸರ್ಕಾರವು ಯೂಟ್ಯೂಬ್ ಮತ್ತು ಟ್ವಿಟರ್​ಗೆ ಆದೇಶ ನೀಡಿದೆ.

YouTube
ಯೂಟ್ಯೂಬ್, ಟ್ವಿಟರ್

By

Published : Jan 25, 2023, 1:33 PM IST

ನವದೆಹಲಿ: ಬ್ರಿಟನ್‌ನ ಬಿಬಿಸಿ ವಾಹಿನಿಯು "ಇಂಡಿಯಾ: ದಿ ಮೋದಿ ಕ್ವೆಶ್ಚನ್" ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಈಗಾಗಲೇ ಪ್ರಸಾರ ಮಾಡಿದೆ. ಈ ಸಾಕ್ಷ್ಯಚಿತ್ರದ ಕುರಿತು ಜಗತ್ತಿನಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಯೂಟ್ಯೂಬ್ ಮತ್ತು ಟ್ವಿಟರ್​ಗೆ ಡಾಕ್ಯುಮೆಂಟರಿ ಕುರಿತಾದ ವಿಡಿಯೋ ಮತ್ತು ಟ್ವೀಟ್‌ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಇಂದು ನಿರ್ದೇಶನ ನೀಡಿದೆ.

ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಇಲಾಖೆಯು ಐಟಿ ನಿಯಮಗಳು 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಈ ನಿರ್ದೇಶನ ನೀಡಿದೆ. ಅಷ್ಟೇ ಅಲ್ಲ, ದೇಶದಲ್ಲಿ ಯೂಟ್ಯೂಬ್ ಮತ್ತು ಟ್ವಿಟರ್ ಎರಡೂ ಕೇಂದ್ರದ ಆದೇಶವನ್ನು ಅನುಸರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಸಾಕ್ಷ್ಯಚಿತ್ರ ಬಿಡುಗಡೆಯಾಗದಿದ್ದರೂ ಕೆಲವೊಂದು ಯೂಟ್ಯೂಬ್ ಚಾನೆಲ್‌ಗಳು ಅದನ್ನು ಅಪ್‌ಲೋಡ್ ಮಾಡಿವೆ. ಹೀಗಾಗಿ, ಯೂಟ್ಯೂಬ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತೊಮ್ಮೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರೆ ಅದನ್ನು ನಿರ್ಬಂಧಿಸಬೇಕು ಎಂದು ಸೂಚನೆ ನೀಡಲಾಗಿದೆ. ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಲಿಂಕ್ ಹೊಂದಿರುವ ಟ್ವೀಟ್‌ಗಳನ್ನು ಗುರುತಿಸಿ, ನಿರ್ಬಂಧಿಸಲು ನಿರ್ದೇಶಿಸಲಾಗಿದೆ.

ಏನಿದು ವಿವಾದ?:ಡಾಕ್ಯುಮೆಂಟರಿಯು ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಗಲಭೆಯನ್ನು ಒಳಗೊಂಡಿದೆ. ಈ ಗಲಭೆಯಲ್ಲಿ ಮೋದಿ ಅವರ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ. ಹಿಂಸಾಚಾರ ನಡೆದಾಗ ಮೋದಿ ಅವರು ಗುಜರಾತ್​ ಮುಖ್ಯಮಂತ್ರಿ ಆಗಿದ್ದರು. ಪ್ರಧಾನಿಯಾದ ಬಳಿಕ ಕೈಗೊಂಡ ಆರ್ಟಿಕಲ್ 370 ರದ್ದತಿ ನಿರ್ಧಾರದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಜೆಎನ್​ಯುನಲ್ಲಿ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ಕಲ್ಲು ತೂರಾಟ: ಆರೋಪ

ಎಲ್ಲೆಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ?: ಬಿಬಿಸಿಯ ಈ ವಿವಾದಿತ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇದನ್ನು ಎಲ್ಲಿಯೂ ಪ್ರದರ್ಶಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಿದಾಗ್ಯೂ ಹಲವೆಡೆ ನಿಯಮ ಮೀರಿ ಪ್ರದರ್ಶನ ಮಾಡಲಾಗುತ್ತಿದೆ. ನಿನ್ನೆಯಷ್ಟೇ ಹೈದರಾಬಾದ್​ನ ಕೇಂದ್ರೀಯ ವಿವಿ, ಕೇರಳದ ಕಾಲೇಜೊಂದರಲ್ಲಿ ಚಿತ್ರ ಪ್ರದರ್ಶಿಸಲಾಗಿದೆ. ಬಳಿಕ ಜೆಎನ್​ಯುನಲ್ಲಿ ಅನುಮತಿರಹಿತ ಪ್ರದರ್ಶನಕ್ಕೆ ವಿದ್ಯಾರ್ಥಿಗಳ ಒಕ್ಕೂಟ ಮುಂದಾದಾಗ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಬಿಬಿಸಿ ಸಾಕ್ಷ್ಯಚಿತ್ರ ಟೀಕಿಸಿದ್ದ ಕೇಂದ್ರದ ಮಾಜಿ ಸಚಿವ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್​ಗೆ ರಾಜೀನಾಮೆ

ಸಾಕ್ಷ್ಯಚಿತ್ರಕ್ಕೆ ಅನಿಲ್ ಕೆ.ಆ್ಯಂಟನಿ ವಿರೋಧ: ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರದರ್ಶಿಸುವುದನ್ನು ವಿರೋಧಿಸಿದ್ದ ಕೇಂದ್ರದ ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಕೆ.ಆ್ಯಂಟನಿ ಇಂದು ಕಾಂಗ್ರೆಸ್​ಗೆ ವಿದಾಯ ಹೇಳಿದ್ದಾರೆ. ಪ್ರಧಾನಿ ಮೋದಿ ವಿರುದ್ಧದ ಸಾಕ್ಷ್ಯಚಿತ್ರವನ್ನು ಟೀಕಿಸಿದ ಒಂದು ದಿನದ ನಂತರ ಕಾಂಗ್ರೆಸ್‌ನಿಂದ ಅವರು ಹೊರಬಂದಿದ್ದಾರೆ. ಅನಿಲ್ ಆ್ಯಂಟನಿ ಕೆಪಿಸಿಸಿ ಡಿಜಿಟಲ್ ಮೀಡಿಯಾದ ಸಂಚಾಲಕ ಹಾಗು ರಾಷ್ಟ್ರೀಯ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು.

ABOUT THE AUTHOR

...view details