ಫಿರೋಜ್‌ಪುರ (ಪಂಜಾಬ್): ಜಾತ್ರೆಯಲ್ಲಿ ಉಯ್ಯಾಲೆ ಆಡುತ್ತಿದ್ದಾಗ ಕೆಳಗಡೆ ಬಿದ್ದು ಇಬ್ಬರು ಬಾಲಕರು ಪ್ರಾಣ ಕಳೆದುಕೊಂಡ ಘಟನೆ ಫಿರೋಜ್‌ಪುರ ಜಿಲ್ಲೆಯಲ್ಲಿ ಸಂಭವಿಸಿದೆ. ಮತ್ತೋರ್ವ ಬಾಲಕ ಕೂಡ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಲ್ಚಿಕೆ ಗ್ರಾಮದಲ್ಲಿ ಜಾತ್ರೆಯಲ್ಲಿ ದುರ್ಘಟನೆ ಘಟಿಸಿದೆ. ಉಯ್ಯಾಲೆ ಆಡುತ್ತಿದ್ದಾಗ ಹಗ್ಗ ತುಂಡಾಗಿದೆ. ಮೂವರು ಬಾಲಕರು ಕೆಳಗಡೆ ಬಿದ್ದಿದ್ದಾರೆ. ಮೂವರ ಕುತ್ತಿಗೆಗೂ ತುಂಡಾದ ಹಗ್ಗ ಸಿಲುಕಿಕೊಂಡಿದೆ. ಉಯ್ಯಾಲೆ ನಿಲ್ಲುವ ಹೊತ್ತಿಗೆ ಮೂವರೂ ಸಹ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರು ಬಾಲಕರು ಮೃತಪಟ್ಟಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಬಾಲಕನನ್ನು ಇಲ್ಲಿನ ಕಲುವಾಲ ನಿವಾಸಿ ಜೋಗಿಂದರ್ ಸಿಂಗ್ ಎಂಬವರ ಮಗ, 15 ವರ್ಷದ ಅಮನದೀಪ್ ಎಂದು ಗುರುತಿಸಲಾಗಿದೆ. ಈತನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತಪಟ್ಟ ಬಾಲಕರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಫಿರೋಜ್‌ಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಯ್ಯಾಲೆಯ ಮಾಲೀಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಉಯ್ಯಾಲೆಯಿಂದ ಬಿದ್ದು ಅತ್ತೆ ಸಾವು: ಸೊಸೆಗೆ ಗಂಭೀರ ಗಾಯ
ನೋಯ್ಡಾ ಘಟನೆಯ ನೆನಪು:ಕಳೆದ ಸೆಪ್ಟೆಂಬರ್ನಲ್ಲಿ ದೆಹಲಿ ಸಮೀಪದ ನೋಯ್ಡಾದಲ್ಲಿ ಇಂತಹದ್ದೇ ಘಟನೆ ವರದಿಯಾಗಿತ್ತು. ಸೆಕ್ಟರ್ 39 ಪೊಲೀಸ್ ಠಾಣಾ ವ್ಯಾಪ್ತಿಯ ಸೋಮ್ ಬಜಾರ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಡೆಯುತ್ತಿದ್ದ ಉತ್ಸವದಲ್ಲಿ ಉಯ್ಯಾಲೆಯಿಂದ ಅತ್ತೆ ಹಾಗೂ ಸೊಸೆ ಕೆಳಗಡೆ ಬಿದ್ದಿದ್ದರು. 50 ವರ್ಷದ ಉಷಾ ಮೃತಪಟ್ಟರೆ, ಈಕೆಯ ಸೊಸೆ ಶಾಲು ಗಂಭೀರವಾಗಿ ಗಾಯಗೊಂಡಿದ್ದರು.
ಸದರ್‌ಪುರದ ನಿವಾಸಿಗಳಾಗಿದ್ದ ಉಷಾ ಹಾಗೂ ಶಾಲು ಜಾತ್ರೆ ನೋಡಲು ತೆರಳಿ ಉಯ್ಯಾಲೆಯಲ್ಲಿ ಆಡುತ್ತಿದ್ದರು. ಆದರೆ, ಉಯ್ಯಾಲೆ ಚಲನೆಯಲ್ಲಿ ಇರುವಾಗಲೇ ಉಷಾ ಕೆಳಗಿಳಿಯಲು ಯತ್ನಿಸಿದ್ದಾರೆ. ಆಗ ಸೊಸೆ ತಡೆಯಲು ಮುಂದಾಗಿ ಇಬ್ಬರೂ ಕೆಳಗಡೆ ಬಿದ್ದಿದ್ದರು. ಜಾತ್ರೆಯಲ್ಲಿ ನೆರೆದಿದ್ದ ಜನರು ಇವರನ್ನು ಆಸ್ಪತ್ರೆಗೆ ರವಾನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಉಷಾ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಯಾರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂಬ ಬಗ್ಗೆ ಪತ್ತೆ ಹಚ್ಚಲು ತನಿಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಟ್ರಕ್ಗೆ ಹಿಂಬದಿಯಿಂದ ಟೆಂಪೋ ಟ್ರಾವೆಲರ್ ಡಿಕ್ಕಿ.. 12 ಮಂದಿ ಭಕ್ತರ ದುರ್ಮರಣ, 20 ಜನರಿಗೆ ಗಾಯ