ನವದೆಹಲಿ: ಸದನದೊಳಗೆ ಪ್ರತಿಭಟನೆ ನಡೆಸಿ ಅಮಾನತುಗೊಂಡಿರುವ ಸಂಸದರು ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮುಂದುವರೆಸಿದ್ದಾರೆ. ಹಗಲು-ರಾತ್ರಿ ಎನ್ನದೆ ಕಳೆದ 50 ಗಂಟೆಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಉಭಯ ಸದನಗಳ ಬಾವಿಗಳಿದು ಜಿಎಸ್‌ಟಿ, ಬೆಲೆ ಏರಿಕೆ ಬಗ್ಗೆ ಚರ್ಚಿಸುವಂತೆ ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಲಾಪದಲ್ಲಿ ಭಾರಿ ಗದ್ದಲ ಮತ್ತು ಅಸಂಸದೀಯ ವರ್ತನೆಗಾಗಿ ಟಿಎಂಸಿ ಸಂಸದರಾದ ಶಾಂತಾ ಛೆಟ್ರಿ, ಮೌಸಮ್ ನೂರ್ ಮತ್ತು ಆಪ್ ಸಂಸದ ಸಂಜಯ್ ಸಿಂಗ್ ಸೇರಿದಂತೆ 24 ಸಂಸದರನ್ನು ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ರಾತ್ರೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಸದರೊಬ್ಬರ ಕೈ ಮೇಲೆ ಸೊಳ್ಳೆ ಕುಳಿತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. "ಇದು ಸಂಸತ್ತಿನ ಸೊಳ್ಳೆ ಕಥೆ, ಸಂಸತ್ತಿನೊಳಗೆ ಸೊಳ್ಳೆಗಳಿವೆ. ಆದರೆ, ಪ್ರತಿಪಕ್ಷದ ಸಂಸದರು ಇದಕ್ಕೆಲ್ಲಾ ಹೆದರುವುದಿಲ್ಲ. ಭಾರತೀಯರ ರಕ್ತವನ್ನು ಅದಾನಿಯಂತವರು ಹೀರುತ್ತಿದ್ದಾರೆ" ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಪ್ರತಿಭಟನಾನಿರತ ಸಂಸದರು ರಾತ್ರಿಯಿಡೀ ವಾಶ್ ರೂಂ ತೆರೆದಿರಬೇಕು ಮತ್ತು ನಮ್ಮ ಕಾರುಗಳು ಆವರಣದ ಒಳಗೆ ಬರಲು ಮತ್ತು ಹೊರ ಹೋಗಲು ಅವಕಾಶ ನೀಡಬೇಕು. ಜೊತೆಗೆ ಪ್ರತಿಭಟನೆಯ ಸ್ಥಳದಲ್ಲಿ ಸಣ್ಣ ಟೆಂಟ್ ಹಾಕಲು ಅವಕಾಶ ನೀಡುವಂತೆ ಕೋರಿ ಸ್ಪೀಕರ್‌ಗೆ ಸಹಿ ಮಾಡಿದ ಪತ್ರ ಕಳುಹಿಸಿದ್ದಾರೆ. ಬೇಡಿಕೆಗಳ ಪರಿಶೀಲನೆಗೆ ಸ್ಪೀಕರ್ ಸಹ ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ:ಅಮಾನತಾದ 23 ಸಂಸದರಿಂದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ