ಬದ್ಗಾಮ್(ಕಾಶ್ಮೀರ): ಕಣಿವೆ ನಾಡು ಕಾಶ್ಮೀರದಲ್ಲಿ ಉಗ್ರರು ತಮ್ಮ ಅಟ್ಟಹಾಸ ಮುಂದುವರೆಸಿದ್ದು, ಬದ್ಗಾಮ್ ಜಿಲ್ಲೆಯ ಚದೂರ್ ಪ್ರದೇಶದಲ್ಲಿ ತಹಶೀಲ್ದಾರ್ ಕಚೇರಿ ನೌಕರನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನೌಕರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಆತ ಸಾವನ್ನಪ್ಪಿದ್ದಾನೆ. ಸರ್ಕಾರಿ ಕಚೇರಿಯೊಳಗೆ ನುಗ್ಗಿರುವ ಶಂಕಿತ ಉಗ್ರ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾನೆ.
ಮಧ್ಯ ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ಈ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಾಶ್ಮೀರ ಪೊಲೀಸರು ಅಧಿಕೃತ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ರಾಹುಲ್ ಭಟ್ ಎಂಬ ನೌಕರನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ಈಗಾಗಲೇ ಭದ್ರತಾ ಸಿಬ್ಬಂದಿ ಉಗ್ರನಿಗೋಸ್ಕರ ಶೋಧಕಾರ್ಯ ನಡೆಸುತ್ತಿದ್ದಾರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದಾಳಿ ಮುಂದುವರೆದಿದ್ದು, ಕಂದಾಯ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ರಾಹುಲ್ ಭಟ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ದಾಳಿಯಲ್ಲಿ ಇಬ್ಬರು ಉಗ್ರರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಅಲ್ಪಸಂಖ್ಯಾತ ಸಮುದಾಯದವರ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲೂ ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಸಲಾಗಿತ್ತು. ಇದೀಗ 2022ರಲ್ಲೇ ನಡೆದ ಮೂರನೇ ದಾಳಿ ಇದಾಗಿದೆ. ಕಳೆದ ಏಪ್ರಿಲ್ 13ರಂದು ಸತೀಶ್ ಕುಮಾರ್ ಸಿಂಗ್ ಮೇಲೆ ದಕ್ಷಿಣ ಕಾಶ್ಮೀರದ ಕಕ್ರಾನ್ ಗ್ರಾಮದ ಹೊರಗೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಏಪ್ರಿಲ್ 4ರಂದು ಕಾಶ್ಮೀರಿ ಪಂಡಿತ ಕ್ರಿಶನ್ ಭಟ್ ಮೇಲೂ ದಾಳಿ ನಡೆದಿತ್ತು.
ಘಟನೆ ಖಂಡಿಸಿ, ಕಾಶ್ಮೀರಿ ಪಂಡಿತರಿಂದ ಪ್ರತಿಭಟನೆ
ಕಾಶ್ಮೀರಿ ಪಂಡಿತರ ಪ್ರತಿಭಟನೆ:ಉಗ್ರರ ಅಟ್ಟಹಾಸಕ್ಕೆ ಕಾಶ್ಮೀರಿ ಪಂಡಿತ ನೌಕರ ಸಾವನ್ನಪ್ಪಿರುವ ಘಟನೆ ವಿರೋಧಿಸಿ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗ್ತಿದೆ. ಸ್ಥಳಕ್ಕೆ ಲೆಪ್ಟಿನೆಂಟ್ ಗವರ್ನರ್ ಆಗಮಕ್ಕೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಕಾಶ್ಮೀರಿ ಟೈಗರ್ಸ್ ಉಗ್ರ ಸಂಘಟನೆ ಈ ದಾಳಿ ನಡೆಸಿರುವುದಾಗಿ ಹೊಣೆ ಹೊತ್ತುಕೊಂಡಿದೆ.