ಚಂಡೀಗಢ (ಹರಿಯಾಣ):ದೇಶದಲ್ಲಿ ಕೋವಿಡ್ ಬಿಗಡಾಯಿಸಿದ್ದು, ಹಳ್ಳಿ ಹಳ್ಳಿಗಳಿಗೂ ವೈರಸ್ ಪಸರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ಸ್ಥಗಿತಗೊಳಿಸಬೇಕೆಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರೈತರಿಗೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಖಟ್ಟರ್, "ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ ನಾನು ಮತ್ತೊಮ್ಮೆ ರೈತ ಮುಖಂಡರಿಗೆ ಅವರ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ. ಜನರ ಪ್ರಾಣ ಉಳಿಸುವುದು ನಮ್ಮೆಲ್ಲರ ಏಕೈಕ ಗುರಿ. ಈ ಬಿಕ್ಕಟ್ಟಿನ ಸಮಯದಲ್ಲಿ ಮಾನವ ಜೀವನಕ್ಕಿಂತ ಹೆಚ್ಚೇನೂ ಇಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಟಿಕ್ರಿ ಗಡಿಯಲ್ಲಿ ಮಹಿಳಾ ಹೋರಾಟಗಾರ್ತಿ ಮೇಲೆ ಲೈಂಗಿಕ ದೌರ್ಜನ್ಯ: ತನಿಖೆಯ ಭರವಸೆ ನೀಡಿದ ರೈತ ಮುಖಂಡರು
"ಪ್ರತಿಭಟನೆಯಲ್ಲಿ ಪಾಲ್ಗೊಂಡು ಜನರು ಹಿಂದಿರುಗುತ್ತಿರುವುದರಿಂದ ರಾಜ್ಯದ ಹಳ್ಳಿ ಹಳ್ಳಿಗೂ ಕೊರೊನಾ ಹಬ್ಬುತ್ತಿದೆ. ಅನೇಕ ಗ್ರಾಮಗಳೀಗ ಕೋವಿಡ್ ಹಾಟ್‌ಸ್ಪಾಟ್ ಆಗಿವೆ. ಒಂದು ತಿಂಗಳ ಹಿಂದೆಯೇ ನಾನು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಮತ್ತೆ ಧರಣಿ ಪ್ರಾರಂಭಿಸಬಹುದು" ಎಂದು ಸಿಎಂ ಖಟ್ಟರ್ ರೈತ ಮುಖಂಡರಲ್ಲಿ ಆಗ್ರಹಿಸಿದ್ದಾರೆ.
2020ರ ನವೆಂಬರ್ 26ರಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿ ಭಾಗಗಳಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಯ್ದೆ ರದ್ದುಗೊಳಿಸುವವರೆಗೂ ಧರಣಿ ನಿಲ್ಲಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಹರಿಯಾಣದಲ್ಲಿ ಕೊರೊನಾ ನಿಯಂತ್ರಣಕ್ಕೆ ಮೇ 10ರಿಂದ ಮೇ 17ರವರೆಗೆ ಲಾಕ್ಡೌನ್ ಘೋಷಣೆಯಾಗಿದೆ.