ಕರ್ನಾಟಕ

karnataka

ETV Bharat / bharat

ನಮೀಬಿಯಾದಿಂದ ತಂದ ಚಿರತೆ ಸಾವು: ಕಾರ್ಯಪಡೆ ತಜ್ಞರ ಅರ್ಹತೆ, ಅನುಭವದ ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್ - ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ

ಭಾರತದಲ್ಲಿ ಚಿರತೆಗಳ ಸಂತಾನ ಅಭಿವೃದ್ಧಿ ಯೋಜನೆಯ ಅಂಗವಾಗಿ ಕಳೆದ ವರ್ಷ ನಮೀಬಿಯಾದಿಂದ ತಂದ ಎಂಟು ಚಿರತೆಗಳಲ್ಲಿ ಒಂದು ಇತ್ತೀಚೆಗೆ ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚಿರತೆ (ಚೀತಾ) ಕಾರ್ಯಪಡೆಯಲ್ಲಿರುವ ತಜ್ಞರ ಅರ್ಹತೆ ಮತ್ತು ಅನುಭವದ ಮಾಹಿತಿ ನೀಡುವಂತೆ ಕೇಳಿದೆ.

cheetah dies
ನಮೀಬಿಯಾದ ಚಿರತೆ ಸಾವು

By

Published : Mar 29, 2023, 7:19 AM IST

ನವದೆಹಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ಕಳೆದ ವರ್ಷಾಂತ್ಯದಲ್ಲಿ ತಂದ ಚಿರತೆಯೊಂದು ಮೂತ್ರಪಿಂಡ ಸೋಂಕಿನಿಂದ ಸಾವನ್ನಪ್ಪಿದ ಒಂದು ದಿನದ ಬಳಿಕ, ಚೀತಾ ಕಾರ್ಯಪಡೆಯ ತಜ್ಞರ ಅರ್ಹತೆ ಮತ್ತು ಅನುಭವದ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಕಳೆದ ವರ್ಷ ಭಾರತದಲ್ಲಿ ಚೀತಾಗಳ ಮರುಪರಿಚಯ ಪ್ರಾಜೆಕ್ಟ್‌ ಅಂಗವಾಗಿ ನಮೀಬಿಯಾದಿಂದ ಒಟ್ಟು 8 ಚಿರತೆಗಳನ್ನು ಕರೆತರಲಾಗಿತ್ತು. ಇದರಲ್ಲಿ ಸಶಾ ಎಂಬ ನಾಲ್ಕೂವರೆ ವರ್ಷದ ಹೆಣ್ಣು ಚಿರತೆಯನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ಸ್ಥಳಾಂತರಿಸಲ್ಪಟ್ಟ ಆರು ತಿಂಗಳ ನಂತರ ಮೂತ್ರಪಿಂಡದ ಕಾಯಿಲೆಯಿಂದ ಅಸುನೀಗಿದೆ.

ಜನವರಿ 28, 2020 ರ ಆದೇಶದ ಅನ್ವಯ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) ಇನ್ನು ಮುಂದೆ ನ್ಯಾಯಾಲಯವು ನೇಮಿಸಿದ ತಜ್ಞರ ಸಮಿತಿಯ ಮಾರ್ಗದರ್ಶನ ಮತ್ತು ಸಲಹೆಯನ್ನು ತೆಗೆದುಕೊಳ್ಳುವುದು ಅನಿವಾರ್ಯವೋ ಅಥವಾ ಕಡ್ಡಾಯವೋ ಎಂಬುದನ್ನು ತಿಳಿಸುವಂತೆ ನಿರ್ದೇಶನ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ವಿಕ್ರಮ್ ನಾಥ್ ಅವರ ನೇತೃತ್ವದ ಪೀಠವು, ಚೀತಾ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ಟಾಸ್ಕ್ ಫೋರ್ಸ್‌ನಲ್ಲಿರುವ ತಜ್ಞರು, ಅವರ ಅನುಭವ ಮತ್ತು ಅರ್ಹತೆಯ ವಿವರಗಳನ್ನು ಎರಡು ವಾರಗಳಲ್ಲಿ ಒದಗಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.

ವನ್ಯಜೀವಿ ಸಂರಕ್ಷಣಾ ವಿಭಾಗದ ಮಾಜಿ ನಿರ್ದೇಶಕ ಎಂ.ಕೆ.ರಂಜಿತ್ ಸಿನ್ಹ್, ಉತ್ತರಾಖಂಡದ ಅರಣ್ಯ ಮತ್ತು ವನ್ಯಜೀವಿ ಆಡಳಿತದ ಮುಖ್ಯ ಸಂರಕ್ಷಣಾಧಿಕಾರಿ ಧನಂಜಯ್ ಮೋಹನ್ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಡಿಐಜಿ (ವನ್ಯಜೀವಿ) ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ಭಾರತದಲ್ಲಿ ಆಫ್ರಿಕನ್ ಚೀತಾಗಳ ಪರಿಚಯದ ಕುರಿತು NTCA ಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ:ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದ ನಮೀಬಿಯಾದ ಹೆಣ್ಣು ಚೀತಾ ಸಾವು

ಸಮಿತಿಯ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತೋ ಚಂದ್ರ ಸೇನ್, "ಚೀತಾ ಕಾರ್ಯಪಡೆ ಸಮಿತಿಯು ಚಿರತೆ ತಜ್ಞರನ್ನು ಹೊಂದಿಲ್ಲ. ಚಿರತೆಗಳನ್ನು ತರಲಾಗಿರುವುದರಿಂದ ಎನ್‌ಟಿಸಿಎಯು ಆರಂಭಿಕ ಹಂತದಲ್ಲಿ ಸುಪ್ರೀಂ ಕೋರ್ಟ್ ರಚಿಸಿರುವ ತಜ್ಞರ ಸಮಿತಿಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಬೇಕು. ನಮೀಬಿಯಾದಿಂದ ತಂದ ಚಿರತೆಗಳಲ್ಲಿ ಒಂದನ್ನು ಕಳೆದುಕೊಂಡಿದ್ದೇವೆ, ಚಿರತೆ ನಿರ್ವಹಣೆಯಲ್ಲಿ ವ್ಯಾಪಕ ಜ್ಞಾನ ಮತ್ತು ಅನುಭವ ಹೊಂದಿರುವ ಪರಿಣಿತರ ಅಗತ್ಯವಿದೆ" ಎಂದು ಹೇಳಿದರು.

ಕೇಂದ್ರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, "ಚಿರತೆಯನ್ನು ಭಾರತದಲ್ಲಿ ಪರಿಚಯಿಸಲು ಸರ್ಕಾರ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಈ ಕ್ರಿಯಾ ಯೋಜನೆಯು ಭಾರತ ಮತ್ತು ನಮೀಬಿಯಾ, ದಕ್ಷಿಣ ಆಫ್ರಿಕಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ(ಯುಎಸ್ಎ) ಮುಂತಾದ ಇತರೆ ದೇಶಗಳ ವಿಜ್ಞಾನಿಗಳು, ಪಶುವೈದ್ಯರು, ಅರಣ್ಯ ಅಧಿಕಾರಿಗಳು ಮತ್ತು ಚಿರತೆ ತಜ್ಞರೊಂದಿಗೆ ಸಮಾಲೋಚಿಸಿ ಸಂಗ್ರಹಿಸಿದ ಸಮಗ್ರ ವೈಜ್ಞಾನಿಕ ದಾಖಲೆಯಾಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ:ಅರಬ್​ ರಾಜಕುಮಾರ 10 ವರ್ಷದ ಹಿಂದೆ ಉಡುಗೊರೆಯಾಗಿ ನೀಡಿದ್ದ ಏಕೈಕ ಚೀತಾ ಸಾವು

"ಎಂಟು ಚಿರತೆಗಳನ್ನು ಸೆಪ್ಟೆಂಬರ್ 17, 2022 ರಂದು ನಮೀಬಿಯಾದಿಂದ ಭಾರತಕ್ಕೆ ಕರೆತರಲಾಗಿತ್ತು. ಬಳಿಕ ಅವುಗಳನ್ನು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನ ಕುನೊದಲ್ಲಿ ಬಿಡುಗಡೆ ಮಾಡಲಾಯಿತು. 2020 ಜನವರಿ 28 ರಂದು ನ್ಯಾಯಾಲಯದ ಆದೇಶದ ಮೇರೆಗೆ ನೇಮಕಗೊಂಡ ಸಮಿತಿಯೊಂದಿಗೆ ಸಮಾಲೋಚಿಸಿ ಅಂತಾರಾಷ್ಟ್ರೀಯ ಚಿರತೆ ತಜ್ಞರು, ವಿಜ್ಞಾನಿಗಳು, ಪಶುವೈದ್ಯರು, ಅರಣ್ಯ ಅಧಿಕಾರಿಗಳು ಮತ್ತು NTCA ಯ ತಜ್ಞರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಭಾರತದಲ್ಲಿ ಚಿರತೆಯ ಪರಿಚಯದ ಸಂಪೂರ್ಣ ಜವಾಬ್ದಾರಿ ಕೈಗೊಳ್ಳಲಾಗಿದೆ".

ಇನ್ನು "ಚಿರತೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ನೇಮಿಸಿದ ತಜ್ಞರ ಸಮಿತಿಯೊಂದಿಗೆ ನಿರಂತರ ಮೇಲ್ವಿಚಾರಣೆ / ಸಮಾಲೋಚನೆಯ ಅಗತ್ಯವಿಲ್ಲ. ಸಂಬಂಧಿತ ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚಿಸಿ ಚಿರತೆಯನ್ನು ಪರಿಚಯಿಸಲು ವೈಜ್ಞಾನಿಕ ಕ್ರಿಯಾ ಯೋಜನೆಯ ಆಧಾರದ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ತಜ್ಞರ ಸಮಿತಿಯ ಮಾರ್ಗದರ್ಶನ ಮತ್ತು ಸಲಹೆ ತೆಗೆದುಕೊಳ್ಳುವುದನ್ನು ಮುಂದುವರಿಸಲು ಎನ್‌ಟಿಸಿಎಗೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಆದಾಗ್ಯೂ, ಯಾವುದೇ ಹಂತದಲ್ಲಿ ಎನ್‌ಟಿಸಿಎಗೆ ತಜ್ಞರ ನೆರವು ಮತ್ತು ಸಲಹೆಯ ಅಗತ್ಯವಿದ್ದರೆ ಅದನ್ನು ಪಡೆಯಬಹುದು" ಎಂದು ಐಶ್ವರ್ಯ ಭಾಟಿ ಹೇಳಿದರು.

ABOUT THE AUTHOR

...view details