ಮುಂಬೈ/ನವದೆಹಲಿ: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಕ್ಕೆ ಸಂಬಂಧಿಸಿದಂತೆ ಶಿವಸೇನೆ ಶಾಸಕರ ಅನರ್ಹತೆ ಕುರಿತ ವಿಚಾರಣೆಯು ಜುಲೈ 20ರಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ಶಿವಸೇನೆಯ ಎರಡೂ ಬಣಗಳ ಅರ್ಜಿಯನ್ನೂ ಸರ್ವೋಚ್ಛ ನ್ಯಾಯಾಲಯ ಅಂದು ಕೈಗೆತ್ತಿಕೊಳ್ಳಲಿದೆ.
ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಸರ್ಕಾರದ ವಿರುದ್ಧ ಶಿವಸೇನೆಯ ಪ್ರಬಲ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣದ ಶಾಸಕರು ಬಂಡಾಯ ಸಾರಿದ್ದರು. ಹೀಗಾಗಿ ಮುಖ್ಯಮಂತ್ರಿಯಾಗಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸರ್ಕಾರ ಪತನವಾಗಿತ್ತು.
ಅಂತೆಯೇ, ತಮ್ಮ ವಿರುದ್ಧ ಬಂಡಾಯ ಸಾರಿದ್ದ ಶಾಸಕರ ಅನರ್ಹತೆಗಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಅಂದಿನ ಉಪ ಸ್ಪೀಕರ್ ಮೂಲಕ ನೋಟಿಸ್ ಜಾರಿ ಮಾಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಏಕನಾಥ್ ಶಿಂದೆ ಬಣ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅಲ್ಲದೇ, ಮೂಲ ಶಿವಸೇನೆ ನಮ್ಮದೇ ಆಗಿದ್ದು, ಉದ್ಧವ್ ಬಣದ ಶಾಸಕರನ್ನು ಅನರ್ಹಗೊಳಿಸಬೇಕೆಂದು ಶಿಂದೆ ಬಣ ಕೋರಿದೆ. ಇತ್ತ, ಉದ್ಧವ್ ಬಣವು ಶಿಂದೆ ನೇತೃತ್ವದ ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ಕೊಟ್ಟಿರುವುದನ್ನು ಪ್ರಶ್ನಿಸಿದೆ.
ಈ ಎರಡು ಬಣಗಳ ಅರ್ಜಿಗಳು ಜು.20ರಂದು ಸುಪ್ರೀಂ ಮುಂದೆ ಬರಲಿವೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ನೇತೃತ್ವದ ನ್ಯಾಯ ಪೀಠ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ:ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷದ ಅಭ್ಯರ್ಥಿಯಾಗಿ ಕನ್ನಡತಿ ಮಾರ್ಗರೇಟ್ ಆಳ್ವಾ ಆಯ್ಕೆ