ಖಲಿಸ್ತಾನ್ ಟೈಗರ್ ಫೋರ್ಸ್ ನಾಯಕ ಮತ್ತು ಕುಖ್ಯಾತ ಉಗ್ರಗಾಮಿ ಹರ್ದೀಪ್ ಸಿಂಗ್ ಅವರನ್ನು ಜೂನ್ 18 ರಂದು ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು. ಅದಾದ ನಂತರ ಆಗಸ್ಟ್ 12 ರಂದು ಖಲಿಸ್ತಾನಿಗಳು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಪ್ರಮುಖ ಲಕ್ಷ್ಮಿ ನಾರಾಯಣ ದೇವಾಲಯದ ಮೇಲೆ ದಾಳಿ ನಡೆಸಿದ್ದರು. ಹರ್ದೀಪ್ ಹತ್ಯೆಗೆ ಭಾರತವೇ ಕಾರಣ ಎಂದು ಆರೋಪಿಸಿ ಅವರು ದೇವಾಲಯದ ಮೇಲೆ ದಾಳಿ ಮಾಡಿದ್ದರು. ಈ ಸಂದೇಶ ಸಾರುವ ಪೋಸ್ಟರ್ಗಳನ್ನು ದೇವಾಲಯದ ಗೋಡೆಗೆ ಅಂಟಿಸಿ ಖಲಿಸ್ತಾನಿಗಳು ದೇವಾಲಯವನ್ನು ವಿರೂಪಗೊಳಿಸಿದ್ದರು.
ಈ ತಿಂಗಳ 18 ರಂದು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ, ತಮ್ಮ ದೇಶದ ಪ್ರಜೆ ನಿಜ್ಜರ್ ಅವರ ಹತ್ಯೆಯ ಹಿಂದೆ ಭಾರತೀಯ ಸರ್ಕಾರಿ ಏಜೆಂಟರು ಇರಬಹುದು ಎಂಬ ವಿಶ್ವಾಸಾರ್ಹ ಮಾಹಿತಿಗಳಿವೆ ಎಂದು ಹೇಳಿಕೆ ನೀಡಿದರು. ಭಾರತದ ವಿರುದ್ಧ ದ್ವೇಷ ಉಗುಳುತ್ತಿರುವ ಖಲಿಸ್ತಾನಿಗಳ ಹೇಳಿಕೆಗಳನ್ನು ಅವರು ಈ ಸಂದರ್ಭದಲ್ಲಿ ಬೆಂಬಲಿಸಿದರು. ಹರ್ದೀಪ್ ಸಿಂಗ್ ನಿಜ್ಜರ್ ಒಂದು ಡಜನ್ ಗೂ ಹೆಚ್ಚು ಕೊಲೆ ಮತ್ತು ಭಯೋತ್ಪಾದಕ ಪ್ರಕರಣಗಳಲ್ಲಿ ವಾಂಟೆಡ್ ಟೆರ್ರಿಸ್ಟ್ ಆಗಿದ್ದ. ನಕಲಿ ಪಾಸ್ಪೋರ್ಟ್ ಮೇಲೆ ಕೆನಡಾಕ್ಕೆ ತೆರಳಿದ್ದ ಈತ 2014ರಿಂದ ಇಂಟರ್ಪೋಲ್ನ ರೆಡ್ ನೋಟಿಸ್ನಲ್ಲಿದ್ದಾನೆ. ಹರ್ದೀಪ್ ಸಿಂಗ್ ಈತನ ಮೇಲಿರುವ ಎಲ್ಲ ಆರೋಪಗಳ ಸಂಪೂರ್ಣ ವಿವರಗಳನ್ನು ಭಾರತ ಕೆನಡಾಕ್ಕೆ ನೀಡಿದ್ದು, ಆತನನ್ನು ಬಂಧಿಸುವಂತೆ ಕೋರಲಾಗಿತ್ತು.
ಆದರೆ ಹರ್ದೀಪ್ ಸಿಂಗ್ನನ್ನು ಬಂಧಿಸಲು ಕೆನಡಾದ ಅಧಿಕಾರಿಗಳು ಯಾವುದೇ ಆಸಕ್ತಿ ತೋರಲಿಲ್ಲ. ಅಷ್ಟೇ ಅಲ್ಲದೆ ಆತನಿಗೆ ತಮ್ಮ ಕೆನಡಾದ ಪೌರತ್ವವನ್ನು ಕೂಡ ನೀಡಲಾಯಿತು. ಭಯೋತ್ಪಾದಕನೊಬ್ಬನ್ನು ತನ್ನ ಪ್ರಜೆಯಾಗಿ ಮಾಡಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಒಂದು ಕಡೆಯಾದರೆ, ಭಾರತದ ವಿರುದ್ಧ ಆರೋಪ ಹೊರಿಸುವ ಮೂಲಕ ಮತ್ತೊಂದೆಡೆ ಟ್ರುಡೊ ತಮ್ಮ ಮೂರ್ಖತನದ ಪರಮಾವಧಿಯನ್ನು ಜಗತ್ತಿಗೆ ಸಾರಿದ್ದಾರೆ.
ಕೆನಡಾದ ಪ್ರಧಾನಿ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಬಹಳ ದೊಡ್ಡ ಮತ್ತು ಸರಿಪಡಿಸಲಾಗದ ತಪ್ಪು ಮಾಡಿದ್ದಾರೆ ಎಂದು ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕೆಲ್ ರೂಬಿನ್ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಸ್ಟಿನ್ ಟ್ರುಡೊ ಅವರು ತಮ್ಮ ಅಲ್ಪಮತದ ಸರ್ಕಾರದಲ್ಲಿ ಅಧಿಕಾರದ ಹಿಡಿತವನ್ನು ಹೊಂದಿರುವ ರಾಷ್ಟ್ರೀಯ ಡೆಮಾಕ್ರಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಅವರ ಬೆಂಬಲದೊಂದಿಗೆ ಸಿಖ್ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಪ್ರಯತ್ನದ ಭಾಗವಾಗಿ ತಮ್ಮ ಅನಗತ್ಯ ಹೇಳಿಕೆಗಳ ಮೂಲಕ ಟ್ರುಡೊ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯೊಡ್ಡುವ ಉಗ್ರಗಾಮಿ ಗುಂಪುಗಳಿಗೆ ಕೆನಡಾ ಆಶ್ರಯ ತಾಣವಾಗಿರುವುದು ಈಗ ರಹಸ್ಯವೇನಲ್ಲ. ಸ್ವಯಂ ಘೋಷಿತ 'ಖಲಿಸ್ತಾನ್ ಕೌನ್ಸಿಲರ್ ಜನರಲ್' ಸುರ್ಜನ್ ಸಿಂಗ್ ಗಿಲ್ 1982 ರಲ್ಲಿ ಕೆನಡಾದ ವ್ಯಾಂಕೋವರ್ನಲ್ಲಿ ಪರ್ಯಾಯ ಸರ್ಕಾರವನ್ನೇ ಘೋಷಿಸಿದ್ದ. ಈತ ಖಲಿಸ್ತಾನಿ ಪಾಸ್ಪೋರ್ಟ್ಗಳನ್ನು ನೀಡುವ ಮಟ್ಟಕ್ಕೂ ಹೋಗಿದ್ದ. ಪಂಜಾಬ್ನಲ್ಲಿ ಇಬ್ಬರು ಪೊಲೀಸರನ್ನು ಕೊಂದು ಕೆನಡಾಕ್ಕೆ ಪರಾರಿಯಾಗಿದ್ದ ತಲ್ವಿಂದರ್ ಸಿಂಗ್ ಪರ್ಮಾರ್ ಅವನನ್ನು ಭಾರತಕ್ಕೆ ಹಸ್ತಾಂತರಿಸಲು ಅಂದಿನ ಕೆನಡಾದ ಪ್ರಧಾನಿ ಪಿಯರೆ ಎಲಿಯಟ್ ಟ್ರುಡೋ (ಇಂದಿನ ಪ್ರಧಾನಿ ಜಸ್ಟಿನ್ ಅವರ ತಂದೆ) ನಿರಾಕರಿಸಿದ್ದರು.