ಹೈದರಾಬಾದ್: ಕೊವ್ಯಾಕ್ಸಿನ್ ಲಸಿಕೆ ಉತ್ಪಾದಕ ಕಂಪನಿ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ನ್ನು ಕೇವಲ 150 ರೂ.ಗೆ ಕೇಂದ್ರ ಸರ್ಕಾರಕ್ಕೆ ದೀರ್ಘಾವಧಿಯವರೆಗೆ ಪೂರೈಕೆ ಮಾಡುವುದು ಕಷ್ಟ ಎಂದು ಅಸಮಾಧಾನ ಹೊರಹಾಕಿದೆ. ಅಲ್ಲದೇ ಇದು ಸ್ಪರ್ಧಾತ್ಮಕ ಮತ್ತು ಸುಸ್ಥಿರ ಬೆಲೆಯೂ ಅಲ್ಲ. ಹಾಗಾಗಿ ಲಸಿಕೆ ತಯಾರಿಕಾ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಖಾಸಗಿ ಮಾರುಕಟ್ಟೆಯಲ್ಲಾದರೂ ಬೆಲೆ ಹೆಚ್ಚಿಸುವ ಅಗತ್ಯತೆ ಇದೆ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಭಾರತ್ ಬಯೋಟೆಕ್, ಕೇಂದ್ರ ಸರ್ಕಾರದ ನಿರ್ದೇಶನದಂತೆ, ಇದುವರೆಗೆ ಉತ್ಪಾದನೆ ಮಾಡಲಾದ ಕೊವ್ಯಾಕ್ಸಿನ್ ಲಸಿಕೆಯಲ್ಲಿ ಶೇ.10ಕ್ಕಿಂತಲೂ ಕಡಿಮೆ ಪ್ರಮಾಣವನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ. ಹಾಗೇ, ಉಳಿದ ಹೆಚ್ಚಿನ ಪಾಲನ್ನು ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ಸರಬರಾಜು ಮಾಡಿದ್ದೇವೆ.
ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಿದ್ದರೂ ಕಂಪನಿ ಒಂದು ಡೋಸ್ಗೆ 250ರೂ.ಗಿಂತಲೂ ಕಡಿಮೆ ದರವನ್ನೇ ಪಡೆದಿದೆ. ಮುಂಬರುವ ದಿನಗಳಲ್ಲಿ ಶೇ.75ರಷ್ಟು ಡೋಸ್ನ್ನು ಸರ್ಕಾರಗಳಿಗೆ ಪೂರೈಸುತ್ತೇವೆ. ಉಳಿದ ಶೇ.25 ರಷ್ಟು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.