ನವದೆಹಲಿ: ವಂಚನೆಯ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಮತ್ತು ಸಹಚರರ ವಿರುದ್ಧ ನಡೆಯುತ್ತಿರುವ 200 ಕೋಟಿ ರೂಪಾಯಿ ಮನಿ ಲಾಂಡರಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ದಾಖಲಿಸಲು ಬಾಲಿವುಡ್ ನಟಿ ನೋರಾ ಫತೇಹಿ ಶುಕ್ರವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
30 ವರ್ಷದ ನಟಿ ನೋರಾ ಫತೇಹಿ ಅವರನ್ನು ಈ ಹಿಂದೆಯೂ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದ್ದವು. ಈ ಬಾರಿ ಸುಕೇಶ್ ಚಂದ್ರಶೇಖರ್ ಕುರಿತು ವಿಚಾರಣೆ ನಡೆಸಲಾಗುವುದು ಮತ್ತು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ಸೆಕ್ಷನ್‌ಗಳ ಅಡಿ ನಟಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್‌ನಲ್ಲಿ ಆರ್ಥಿಕ ಅಪರಾಧಗಳ ವಿಭಾಗದ ಮುಂದೆ ಹಾಜರಾಗಿದ್ದ ನೋರಾ ಫತೇಹಿ, ತಾನು ಈ ಪಿತೂರಿಯ ಬಲಿಪಶುವಾಗಿದ್ದು, ಪಿತೂರಿಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದರು. ಸುಕೇಶ್ ಜೊತೆಗಿನ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಆವರು ಪೊಲೀಸರಿಗೆ ತೋರಿಸಿದ್ದರು.
ಸುಕೇಶ್ ಚಂದ್ರಶೇಖರ್ ರೋಹಿಣಿ ಜೈಲಿನಲ್ಲಿದ್ದಾಗ 200 ಕೋಟಿ ರೂಪಾಯಿ ಮೌಲ್ಯದ ಸುಲಿಗೆ ದಂಧೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಜೈಲಿನಲ್ಲಿರುವ ಮಾಜಿ ರಾನ್‌ಬಾಕ್ಸಿ ಮಾಲೀಕ ಶಿವಿಂದರ್ ಸಿಂಗ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವುದಾಗಿ ಹೇಳಿ ಅವರ ಪತ್ನಿ ಅದಿತಿ ಸಿಂಗ್ ಗೆ ಈ ವಂಚನೆ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.