ಆಗ್ರಾ (ಉತ್ತರ ಪ್ರದೇಶ):ಪಾಕಿಸ್ತಾನ ವಿರುದ್ಧದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ನಂತರ ಸಂಭ್ರಮಾಚರಣೆ ಮಾಡಿದ ಆರೋಪದಡಿ ಬಂಧಿತರಾಗಿರುವ ಆಗ್ರಾದ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ಮೇಲಿನ ದೇಶದ್ರೋಹದ ಆರೋಪಗಳನ್ನು ಹಿಂಪಡೆಯಲು ಮಧ್ಯಪ್ರವೇಶಿಸುವಂತೆ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರದಂದು ಪತ್ರ ಬರೆದಿದೆ.
ಮಾನವೀಯ ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸಂಘವು ಮೋದಿಯವರಿಗೆ ಪತ್ರದಲ್ಲಿ ಮನವಿ ಮಾಡಿದೆ.
ಮನವಿ:
ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ, ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧದ ಕ್ರಮವು ಸಂಪೂರ್ಣವಾಗಿ ಅನಪೇಕ್ಷಿತವಾಗಿದೆ. ಇದು ಆಕ್ರಮ ಆಗಿರಬಹುದು, ಆದರೆ ಇದು ಯಾವುದೇ ರೀತಿಯಲ್ಲಿ ಕಾನೂನುಬಾಹಿರವಲ್ಲ. ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸುವುದರಿಂದ ಅವರ ಮುಂದಿನ ವೃತ್ತಿ ಜೀವನ ಹಾಳಾಗುತ್ತದೆ. ಕಠಿಣವಾಗಿ ಪ್ರತಿಕ್ರಿಯಿಸುವ ಬದಲು ಅವರಿಗೆ ಸಲಹೆ ನೀಡಬೇಕಾಗಿದೆ ಎಂದರು. ವಿದ್ಯಾರ್ಥಿಗಳ ಮೇಲಿನ ದೇಶದ್ರೋಹದ ಆರೋಪಗಳನ್ನು ಹಿಂಪಡೆಯಲು ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದ ಅವರು, ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಮರಳಲು ಅವಕಾಶವನ್ನು ನೀಡಬಹುದು ಎಂದು ಸಂಘವು ಭಾವಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.