ಅಮರಾವತಿ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಒಂದೇ ಬಾರಿಗೆ ಎರಡು ದುರಂತ ಘಟನೆಗಳು ನಡೆದ ಬಗ್ಗೆ ವರದಿಯಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಒಂದು ದುರಂತವಾದರೆ, ಸ್ಥಳಕ್ಕೆ ಆಗಮಿಸಿ ಇದನ್ನು ನೋಡಿದ ಹಾಸ್ಟೆಲ್ ವಾರ್ಡನ್ ಆಘಾತದಿಂದ ಸಾವನ್ನಪ್ಪಿರುವುದು ಮತ್ತೊಂದು ದುರಂತವಾಗಿದೆ. ಗುಡೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ದಹರಣೇಶ್ವರ ರೆಡ್ಡಿ (20) ಎಂಬುವರು ಶನಿವಾರ ಕಾಲೇಜು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಎಸ್‌ಆರ್ ಕಡಪ ಜಿಲ್ಲೆಯವರಾದ ಇವರು ಸಿಎಸ್‌ಇ ಎರಡನೇ ವರ್ಷದಲ್ಲಿ ಓದುತ್ತಿದ್ದರು.
ವಿಷಯ ತಿಳಿದ ಹಾಸ್ಟೆಲ್ ವಾರ್ಡನ್ ಬಿ. ಶ್ರೀನಿವಾಸುಲು ನಾಯ್ಡು, ಕಾಲೇಜು ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳಕ್ಕೆ ಧಾವಿಸಿದರು. ಆದರೆ ಶ್ರೀನಿವಾಸುಲು ನಾಯ್ಡು (54) ವಿದ್ಯಾರ್ಥಿ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಅವರು ತಕ್ಷಣ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ. ನಾಯ್ಡು ಅವರಿಗೆ ಹೃದಯ ಸ್ತಂಭನವಾಗಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿ ಬಂಧನ: 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಶನಿವಾರ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಬಂಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುರ್ವಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಅತ್ಯಾಚಾರದ ಘಟನೆ ನಡೆದಿದ್ದು, ಮರುದಿನ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದಾಗ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿ ಸೌರಭ್ ಅಗ್ರಹರಿ ಎಂಬಾತನ ಸಹೋದರಿಯು ಸಂತ್ರಸ್ತ ಬಾಲಕಿಯ ಮನೆಯ ಪಕ್ಕದಲ್ಲಿ ವಾಸಿಸುವ ಕುಟುಂಬದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾಳೆ. ಮಂಗಳವಾರ ತನ್ನ ಸಹೋದರಿಯನ್ನು ಭೇಟಿ ಮಾಡಲು ಬಂದಿದ್ದ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯು ಬಾಲಕಿಗೆ ಪರಿಚಿತನಾಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಿಂದ ಮನನೊಂದ ಬಾಲಕಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಚಿಕಿತ್ಸೆಗಾಗಿ ಲಕ್ನೋಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಶುಕ್ರವಾರ ನಿಧನಳಾಗಿದ್ದಾಳೆ. ಆರೋಪಿ ಅಗ್ರಹರಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ವ್ಯಕ್ತಿ ಆತ್ಮಹತ್ಯೆ: ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದಿನ ಬಾಲಾಜಿನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಮುಕೇಶ್ ಗಾವಂಡೆ (30), ಎಂದು ಗುರುತಿಸಲಾಗಿದೆ. ಮುಕೇಶ್ ನಗರದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದು, ಕೇಟರಿಂಗ್ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈತ ಮಹಿಳೆಯೊಬ್ಬರ ಸಂಪರ್ಕಕ್ಕೆ ಬಂದಿದ್ದು, ಇಬ್ಬರೂ ಕಳೆದ ಕೆಲವು ದಿನಗಳಿಂದ ಬಾಲಾಜಿನಗರ ಪ್ರದೇಶದಲ್ಲಿ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಮಹಿಳೆ ಎದ್ದು ನೋಡಿದಾಗ ಮುಕೇಶ್ ಶವವಾಗಿ ಕಂಡು ಬಂದಿದ್ದಾರೆ. ಕೂಡಲೇ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮುಕೇಶ್ನನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಜಿಎಂಸಿಎಚ್) ಸಾಗಿಸಿದರು. ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಆತ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿರುವ ಮುಕೇಶ್, ‘ಪಿಲ್ಲು ನೀನು ನೆಮ್ಮದಿಯಿಂದ ಬಾಳು, ನನಗೆ ಯಾರ ಮೇಲೂ ದೂರು ಇಲ್ಲ' ಎಂದು ಅದರಲ್ಲಿ ಬರೆದಿದ್ದಾನೆ. ಜವಾಹರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾಗರ ಹಾವಿನೊಂದಿಗೆ ಸೆಲ್ಫಿ ತೆಗದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಯುವಕ....