ನವದೆಹಲಿ :ವಾಯವ್ಯ ಬಂಗಾಲ ಕೊಲ್ಲಿಯಲ್ಲಿ 'ಹಮೂನ್' ಚಂಡಮಾರುತ ತೀವ್ರಗೊಂಡಿದೆ. ಈ ಹಿನ್ನೆಲೆ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಮೂನ್ ಶಬ್ದವು ಇರಾನ್ ಭಾಷೆಯಿಂದ ಬಂದಿದ್ದು, ಒಳನಾಡಿನ ಮರುಭೂಮಿ ಸರೋವರಗಳನ್ನು ಈ ಶಬ್ದವು ಸೂಚಿಸುತ್ತದೆ.
ಮುಂದಿನ ಆರು ಗಂಟೆಗಳಲ್ಲಿ ಹಮೂನ್ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಬಳಿಕ ಈಶಾನ್ಯ ದಿಕ್ಕಿಗೆ ಚಲಿಸುವಾಗ ನಿಧಾನವಾಗಿ ಚಂಡಮಾರುತದ ವೇಗ ಕಡಿಮೆಯಾಗಲಿದೆ. ಈ ಚಂಡಮಾರುತವು ಅಕ್ಟೋಬರ್ 25ರ ಸಂಜೆ ವೇಳೆಗೆ ಬಾಂಗ್ಲಾದೇಶದ ಖೇಪುಪಾರ ಮತ್ತು ಚಿತ್ತಗಾಂಗ್ ನಡುವೆ ಸಾಗಲಿದೆ. ಚಂಡಮಾರುತದ ವೇಗ ಸುಮಾರು 65-75 ಕಿಮೀ ಇರಲಿದೆ. ಇದು ಅತ್ಯಂತ ತೀವ್ರವಾದ ಸೈಕ್ಲೋನಿಕ್ ಚಂಡಮಾರುತ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹಮೂನ್ ಚಂಡಮಾರುತವು ಅಕ್ಟೋಬರ್ 24ರ ಬೆಳಿಗ್ಗೆ 5.30ಕ್ಕೆ 21ಕಿಮೀ ವೇಗದಲ್ಲಿ ವಾಯವ್ಯದಿಂದ ಈಶಾನ್ಯ ದಿಕ್ಕಿಗೆ ಚಲಿಸಿತ್ತು. ಮುಂದೆ 230 ಕಿಮೀ ವೇಗದಲ್ಲಿ ಪರದೀಪ್( ಒಡಿಶಾ), 240 ಕಿಮೀ ವೇಗದಲ್ಲಿ ದಿಘಾ( ಪಶ್ಚಿಮಬಂಗಾಳ), 280 ಕಿಮೀ ವೇಗದಲ್ಲಿ ಖೇಪುಪಾರದಲ್ಲಿ (ಬಾಂಗ್ಲಾದೇಶ) ಸಂಚರಿಸಲಿದೆ ಎಂದು ಹೇಳಲಾಗಿದೆ.
ಹಮೂನ್ ಚಂಡಮಾರುತ ಹಿನ್ನಲೆ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಅಕ್ಟೋಬರ್ 24ರಿಂದ 26ರವರೆಗೆ ಮಣಿಪುರ, ಮಿಜೋರಾಂ, ತ್ರಿಪುರ, ಮೇಘಾಲಯ, ದಕ್ಷಿಣ ಅಸ್ಸಾಂನಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದೆ. ಅಲ್ಲದೇ ಅಕ್ಟೋಬರ್ 25ರಂದು ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಅಕ್ಟೋಬರ್ 26ರ ಬಳಿಕ ಮಳೆ ಕಡಿಮೆಯಾಗಲಿದೆ. ಕೆಲವು ಕಡೆಗಳಲ್ಲಿ ಸಾಮಾನ್ಯ ಮಳೆ ಮುಂದುವರೆಯಲಿದೆ ಎಂದು ಹೇಳಿದೆ. ಜೊತೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ತೇಜ್ ಚಂಡಮಾರುತ ಅಬ್ಬರ : ಕಳೆದರೆಡು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ತೇಜ್ ಚಂಡಮಾರುತ ಅಬ್ಬರ ಮುಂದುವರೆದಿದೆ. ಇಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ತೇಜ್ ಚಂಡಮಾರುತ ಯೆಮನ್ ಕರಾವಳಿಯನ್ನು ದಾಟಿದೆ. ಯೆಮನ್ನಲ್ಲಿ ಚಂಡಮಾರುತ ತಕ್ಕಮಟ್ಟಿಗೆ ದುರ್ಬಲಗೊಂಡಿದೆ. ಈಶಾನ್ಯ ದಿಕ್ಕಿಗೆ ಚಲಿಸುತ್ತಿರುವ ಈ ಚಂಡಮಾರುತವು ಮುಂದಿನ ಆರು ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಕ್ಕೂ ಮುನ್ನ, ಅಲ್ ಘೈದಾಹ್‌ನ ದಕ್ಷಿಣಕ್ಕೆ ತೇಜ್ ಚಂಡಮಾರುತ ಸಾಗಿತ್ತು. ಈ ಸಂದರ್ಭ ಇದರ ಗರಿಷ್ಠ ವೇಗ ಗಂಟೆಗೆ 125-13 ಕಿ.ಮೀ ಇತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ :ಮಧ್ಯಾಹ್ನದ ವೇಳೆಗೆ ತೇಜ್ ಚಂಡಮಾರುತವು ಅತ್ಯಂತ ತೀವ್ರವಾಗುವ ಸಾಧ್ಯತೆ: ಐಎಂಡಿ ಮುನ್ನೆಚ್ಚರಿಕೆ