ದುರ್ಗಾಪುರ (ಪಶ್ಚಿಮ ಬಂಗಾಳ):ರಾಜ್ಯಗಳ ಪರಿವ್ಯಾಪ್ತಿಯಲ್ಲಿ ಕಲ್ಲಿದ್ದಲು ಕಳ್ಳತನವಾದಲ್ಲಿ ಆಯಾ ಸರ್ಕಾರಗಳೇ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಲಿದ್ದಲು ಕಳ್ಳತನ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಎಫ್‌ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದರು.
ಕಲ್ಲಿದ್ದಲು ಸೇರಿದಂತೆ ಎಲ್ಲ ಖನಿಜ ಸಂಪತ್ತುಗಳ ಕಳ್ಳತನ ತಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು. ಸಿಐಎಸ್‌ಎಫ್ ಪಡೆಗಳು ಕಲ್ಲಿದ್ದಲು ಕಳ್ಳತನ ತಡೆ ವಿರುದ್ಧ ಪೊಲೀಸರ ಜತೆ ಸೇರಿ ಎಫ್‌ಐಆರ್ ದಾಖಲಿಸಿವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕೇಸ್ ದಾಖಲಾಗಿಲ್ಲ ಎಂದು ಜೋಶಿ ಹೇಳಿದರು.
ಕಲ್ಲಿದ್ದಲು ಕಳ್ಳತನವನ್ನು ತಡೆಯಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮಾತ್ರವಲ್ಲದೇ ಎಲ್ಲ ರಾಜ್ಯಗಳ ಸರ್ಕಾರಕ್ಕೂ ಸೂಚಿಸಲಾಗಿದೆ. ಈ ಬಗ್ಗೆ ಯಾವುದೇ ರಾಜಕೀಯ ಮಾಡಲು ಬಯಸುವುದಿಲ್ಲ. ಆದರೆ, ಕಳ್ಳತನವನ್ನು ತಡೆಯುವುದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯ ಎಂದು ಜೋಶಿ ಹೇಳಿದರು.
ಇಸಿಎಲ್ ಗಣಿಗೆ ಪ್ರಹ್ಲಾದ್ ಜೋಶಿ ಭೇಟಿ:ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಇಲ್ಲಿನ ದುರ್ಗಾಪುರದ ಇಸಿಎಲ್ ಗಣಿಗೆ ಭೇಟಿ ನೀಡಿದರು. ಗಣಿಯ ಭವಿಷ್ಯದ ಯೋಜನೆಗಳ ರೂಪುರೇಷೆಗಳನ್ನು ಪರಿಶೀಲಿಸಿದರು. 2025 ರ ವೇಳೆಗೆ 1 ಸಾವಿರ ಕೋಟಿ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿಯನ್ನು ತಲುಪಬಹುದು. ಕಲ್ಲಿದ್ದಲು ಗಣಿಗಳಲ್ಲಿ ಪುನರ್ವಸತಿ ಯೋಜನೆ ಮತ್ತು ಕಾರ್ಮಿಕರ ಸುರಕ್ಷತೆ ಬಗ್ಗೆಯೂ ಆದ್ಯತೆ ನೀಡಲಾಗಿದೆ. ಕಾರ್ಮಿಕರ ಕುಟುಂಬಗಳ ಪರವಾಗಿ ನಿಲ್ಲುವ ನಿಟ್ಟಿನಲ್ಲಿ ಕೋಲ್ ಇಂಡಿಯಾ ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದು ಜೋಶಿ ಹೇಳಿದರು.
ಓದಿ:ಗಾಜಿಯಾಬಾದ್ ಬಳಿಕ ನೋಯ್ಡಾ ಜೈಲಿನ 31 ಕೈದಿಗಳಿಗೆ ವಕ್ಕರಿಸಿದ ಎಚ್ಐವಿ