ತಿರುವನಂತಪುರಂ (ಕೇರಳ):ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಈ ವರ್ಷದ ಏಪ್ರಿಲ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದರು. ಇದೀಗ ಈ ಬಗ್ಗೆ ಆ್ಯಂಟನಿ ಪತ್ನಿ ಎಲಿಜಬೆತ್ ಬಹಿರಂಗ ಹೇಳಿಕೆ ನೀಡಿದ್ದಾರೆ.
ಯೇಸುವಿನ ತಾಯಿ ಸೇಂಟ್ ಮೇರಿ ಬಿಜೆಪಿ ಮೇಲಿದ್ದ ನನ್ನ ದ್ವೇಷವನ್ನು ಬದಲಾಯಿಸಿದ್ದಾರೆ ಎಂದು ಎಲಿಜಬೆತ್ ಹೇಳಿದ್ದಾರೆ. ಅಲಪ್ಪುಳದಲ್ಲಿರುವ ಕ್ರಿಶ್ಚಿಯನ್ ರಿಟ್ರೀಟ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎಲಿಜಬೆತ್ ಮಾತನಾಡಿದರು. ಹೇಳಿಕೆಯ ವಿಡಿಯೋವನ್ನು ದೇಗುಲದ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ.
ಪ್ರಾರ್ಥನೆಯ ನಂತರ ಮಾತೆ ಮೇರಿ ಬಿಜೆಪಿ ಮೇಲಿನ ದ್ವೇಷವನ್ನು ತನ್ನ ಮನಸ್ಸಿನಿಂದ ತೆಗೆದುಹಾಕಿದರು. ಬಿಜೆಪಿ ಸೇರ್ಪಡೆಯಾದ ನಂತರ ಅನಿಲ್ ಆ್ಯಂಟನಿ ಎರಡು ಬಾರಿ ಪೋಷಕರ ಮನೆಗೆ ಭೇಟಿ ನೀಡಿದ್ದರು. ಮನೆಗೆ ಬರಲು ಯಾವುದೇ ತೊಂದರೆ ಇಲ್ಲ ಎಂದು ತಂದೆ ಹೇಳಿದ್ದರು. ಆದರೆ ರಾಜಕೀಯ ಮಾತನಾಡಲು ಸಾಧ್ಯವಿಲ್ಲ, ಕೌಟುಂಬಿಕ ವಿಷಯಗಳ ಬಗ್ಗೆ ಮಾತನಾಡಬಹುದು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಅನಿಲ್ ಓದು ಮುಗಿಸಿದ ನಂತರ ಒಳ್ಳೆಯ ಕೆಲಸ ಸಿಕ್ಕಿತು. ಆದರೆ ರಾಜಕೀಯಕ್ಕೆ ಸೇರುವುದು ಅವನ ದೊಡ್ಡ ಕನಸಾಗಿತ್ತು. ನಾವು ಕಾಂಗ್ರೆಸ್ ಪಕ್ಷವನ್ನು ನಂಬಿ ಬದುಕಿದ್ದೇವೆ. ಬಿಜೆಪಿಗೆ ಹೋಗುವುದನ್ನು ಊಹಿಸಲೂ ಸಾಧ್ಯವಾಗಲಿಲ್ಲ. ಸಿಕ್ಕ ಅವಕಾಶದ ಬಗ್ಗೆ ಅನಿಲ್ ಹೇಳಿದಾಗ ನಾನು ಇಲ್ಲಿಗೆ ಬಂದು ಪ್ರಾರ್ಥಿಸಿದೆ. ಅನಿಲ್ಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯ ಇದೆ ಎಂದೆನಿಸಿತು. ಮಾತೆ ಮೇರಿ ತಕ್ಷಣ ನನ್ನ ಮನಸ್ಸನ್ನು ಬದಲಾಯಿಸಿದರು. ಬಿಜೆಪಿ ಮೇಲಿನ ಕೋಪ ಮತ್ತು ದ್ವೇಷ ಮನಸ್ಸಿನಿಂದ ದೂರವಾಯಿತು. ಮಾತೆ ಮೇರಿ ಅನಿಲ್ ಬಿಜೆಪಿ ಸೇರಲು ಒಪ್ಪಿಕೊಳ್ಳಲು ನನಗೆ ಮನಸ್ಸು ನೀಡಿದರು.
ಆದರೆ ನನ್ನ ಮನೆಯವರಿಗೆ ಏನು ಹೇಳುತ್ತೇನೋ ಎಂಬ ಚಿಂತೆ ಕಾಡುತ್ತಿತ್ತು. ನಾನು ಅವರಿಗೆ ಏನನ್ನೂ ಹೇಳಲಿಲ್ಲ. ನಾಲ್ಕು ದಿನಗಳ ನಂತರ ಮಾಧ್ಯಮಗಳ ಮೂಲಕ ಬಿಜೆಪಿ ಸೇರಿರುವ ವಿಚಾರ ನನ್ನ ಕುಟುಂಬಕ್ಕೆ ತಿಳಿಯಿತು. ನನ್ನ ಪತಿ ಆಘಾತಕ್ಕೊಳಗಾಗಿದ್ದರು. ಆದರೆ ಕ್ರಮೇಣ ಪರಿಸ್ಥಿತಿಯನ್ನು ಅವರು ಶಾಂತವಾಗಿ ನಿಯಂತ್ರಿಸಿದರು. ಮನೆಗೆ ಬಂದರೆ ಏನಾದ್ರೂ ಸಮಸ್ಯೆ ಆಗುತ್ತದೆ ಎಮದು ಭಯವಾಗ್ತಿತ್ತು. ಆದರೆ ಎಲ್ಲರ ಮನಸ್ಸು ಶಾಂತವಾಗಿ ಮನೆಯಲ್ಲೇ ಮಾತುಕತೆ ನಡೆಯಿತು ಎಂದು ವಿವರಿಸಿದ್ದಾರೆ.
ಏಪ್ರಿಲ್‌ನಲ್ಲಿ ಬಿಜೆಪಿ ಸೇರ್ಪಡೆ: ಅನಿಲ್ ಆ್ಯಂಟನಿ ಕಳೆದ ಏಪ್ರಿಲ್‌ನಲ್ಲಿ ಬಿಜೆಪಿ ಸೇರಿದ್ದರು. ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮತ್ತು ಕೇಂದ್ರ ಸಚಿವ ವಿ. ಮುರಳೀಧರನ್ ಅವರ ಉಪಸ್ಥಿತಿಯಲ್ಲಿ ಅನಿಲ್ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದ್ದರು. ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ವಿವಾದದ ಬಗ್ಗೆ ವಿಭಿನ್ನ ನಿಲುವು ತಳೆದಿದ್ದಕ್ಕಾಗಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಅನಿಲ್ ಪಕ್ಷದ ಎಲ್ಲಾ ಅಧಿಕೃತ ಸ್ಥಾನಗಳನ್ನು ತೊರೆದಿದ್ದರು. ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಸಂಚಾಲಕ ಮತ್ತು ಎಐಸಿಸಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ಸೆಲ್ ನಿರ್ವಾಹಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬಿಬಿಸಿ ಸಾಕ್ಷ್ಯಚಿತ್ರ ವಿವಾದದ ಬಗ್ಗೆ ಕಾಂಗ್ರೆಸ್ ಅಧಿಕೃತ ನಿಲುವಿಗಿಂತ ಭಿನ್ನವಾದ ನಿಲುವನ್ನು ಅನಿಲ್ ತೆಗೆದುಕೊಂಡಿದ್ದಾರೆ ಎಂದು ಯುವ ಕಾಂಗ್ರೆಸ್‌ನ ಒಂದು ವಿಭಾಗ ಟೀಕಿಸಿದೆ. ಭಾರತದ ಜನರು ಭಾರತೀಯ ಸಂಸ್ಥೆಗಳ ಮೇಲೆ ಬಿಬಿಸಿಯ ಅಭಿಪ್ರಾಯಗಳಿಗೆ ಆದ್ಯತೆ ನೀಡಿ ದೇಶವನ್ನು ದುರ್ಬಲಗೊಳಿಸುವುದು ಅಪಾಯಕಾರಿ ಎಂದು ಅನಿಲ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ಅದಾನಿ, ಮಾಜಿ ಕಾಂಗ್ರೆಸ್ ನಾಯಕರ ವಿರುದ್ಧ ಟ್ವೀಟ್: ರಾಹುಲ್ ವಿರುದ್ಧ ಕುಟುಕಿದ ಅನಿಲ್ ಆಂಟನಿ