ತಿರುವನಂತಪುರಂ(ಕೇರಳ):ಜೀವನವೇ ಹಾಗೆ ಬಯಸಿದ್ದು ದೊರಕಿತು ಎನ್ನುವಾಗ ಎಲ್ಲವನ್ನು ನಮ್ಮಿಂದ ಕ್ರೂರ ವಿಧಿ ಕಿತ್ತುಕೊಳ್ಳುತ್ತದೆ. ಕೇರಳದಲ್ಲೊಬ್ಬ ಬಾಲಕನ ಮನಕಲಕುವ ಕಥೆಯೂ ಹೀಗೆ ಆಗಿದೆ. ಆತ ತನ್ನ ಶಾಲೆಯಲ್ಲಿಯೇ ಪ್ರತಿಭಾವಂತ ವಿಧ್ಯಾರ್ಥಿ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕಗಳಿಲ್ಲದೇ ಎಲ್ಲಾ ವಿಷಯದಲ್ಲೂ ಎ ಪ್ಲಸ್ ಪಡೆಯುವ ಮೂಲಕ ತನ್ನ ಮೇಲೆ ಶಿಕ್ಷಕರು ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾನೆ. ಆದರೆ ಇದನ್ನು ಸಂಭ್ರಮಿಸಬೇಕಾದ ಆತನೇ ವಿಧಿಯಾಟಕ್ಕೆ ಬಲಿಯಾಗಿದ್ದಾನೆ.
ಶಾಲಾ ಪರೀಕ್ಷೆಯಲ್ಲಿ ಪಾಸ್ ಆದರೂ ಜೀವನದಲ್ಲಿ ಮುಂದುವರೆಯಲಾರದೇ ಅರ್ಧಕ್ಕೆ ತನ್ನ ಬದುಕು ನಿಲ್ಲಿಸಿದ ಈ ದುರದೃಷ್ಟವಶಾತ್ ವಿದ್ಯಾರ್ಥಿ ಹೆಸರು ಸಾರಂಗ್. ಆಲಂಕೋಡ್ ವಂಚಿಯೂರು ಮೂಲದ ಪಿ ಬಿನೇಶ್ ಕುಮಾರ್ ಮತ್ತು ಜಿಟಿ ರಂಜಿನಿ ದಂಪತಿಯ 16 ವರ್ಷದ ಪುತ್ರ ಸಾರಂಗ್ ಮೇ 6 ರಂದು ನಡೆದ ಅಪಘಾತದ ಚಿಕಿತ್ಸೆ ಪಡೆಯುತ್ತಿದ್ದ. ಮೇ 17 ರಂದು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.
ಅಂದು ನಡೆದಿದ್ದೇನು.. ಮೇ 6 ರಂದು ಸಂಜೆ ಸಾರಂಗ್ ತನ್ನ ತಾಯಿಯೊಂದಿಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ರಸ್ತೆಯಲ್ಲಿ ಮತ್ತೊಂದು ವಾಹನಕ್ಕೆ ಸೈಡ್ ಕೊಡಲು ಹೋಗಿ ಸಾರಂಗ್ ಅವರಿದ್ದ ಆಟೋ ಕುನ್ನತುಕೋಣಂ ಸೇತುವೆ ಬಳಿ ಪಲ್ಟಿಯಾಗಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಾರಂಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಆತನ ದೇಹ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಇದೀಗ ಸಾರಂಗ್ ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾನೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಸಾರಂಗ್:ಬುಧವಾರ ಮೃತಪಟ್ಟ ಸಾರಂಗ್ನ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಆತನ ದೇಹನ ಭಾಗಗಳು ಒಟ್ಟು 6 ಜನರ ಬಾಳಿಗೆ ಬೆಳಕಾಗಿದ್ದಾನೆ. ಸಣ್ಣ ಪ್ರಾಯದಲ್ಲಿ ತನ್ನ ಬದುಕು ಮುಗಿಸಿದರು ಸಮಾಜಕ್ಕೆ ಮಾದರಿಯಾಗಿ ನಿಜ ಜೀವನದಲ್ಲಿ ಹೀರೋ ಆದ ಸಾರಂಗ್ ಫುಟ್ಬಾಲ್ ಆಟಗಾರ ಕೂಡ ಹೌದು. ಈತನಿಗೆ ರೊನಾಲ್ಡೊ ಅವರಂತೆ ಫುಟ್ಬಾಲ್ ಆಟಗಾರನಾಗಬೇಕೆಂದು ಕನಸು ಇತ್ತು. ತನ್ನ ಚಿಕಿತ್ಸೆಯ ಸಮಯದಲ್ಲಿ ಪ್ರಜ್ಞೆ ಬಂದಾಗ ತುಂಬಾ ಇಷ್ಟಪಡುವ ಫುಟ್ಬಾಲ್ ಕಿಟ್ನ್ನು ಕೇಳಿದ್ದಾನೆ.
ಇನ್ನು ಮೇ 19 ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಕೇರಳ ರಾಜ್ಯದಲ್ಲಿ ಪ್ರಕಟವಾಗಿದೆ. 122913 ಸಾರಂಗ್ನ ನೋಂದಣಿ ಸಂಖ್ಯೆಯಾಗಿದ್ದು, ಸಾರಂಗ್ನ ಫಲಿತಾಂಶವನ್ನು ಶಿಕ್ಷಣ ಸಚಿವರು ಓದಿದ್ದಾರೆ. ತನ್ನ ಶಿಕ್ಷಣದಲ್ಲಿನ ಯಶಸ್ಸಿಗೆ ಮತ್ತು ಅಂಗಾಂಗ ದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಸಾರಂಗ್ ಕುಟುಂಬಕ್ಕೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
ಹಾಗೆ ಪರೀಕ್ಷಾ ಫಲಿತಾಂಶ ಹೊರಬಿದ್ದಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿ ಸಾರಂಗ್ ನಿಧನಕ್ಕೆ ಫೇಸ್ ಬುಕ್ನಲ್ಲಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಮಗನ ಸಾವಿನ ತೀವ್ರ ದುಃಖದ ನಡುವೆಯೂ ಅಂಗಾಂಗ ದಾನ ಮಾಡಲು ಮುಂದೆ ಬಂದ ಪೋಷಕರ ನಿರ್ಧಾರ ಅನುಕರಣೀಯ ಎಂದು ವೀಣಾ ಜಾರ್ಜ್ ಸಾಮಾಜಿಕ ಜಾಲತಾಣದಲ್ಲಿ ಬರೆದು ಶ್ಲಾಘಿಸಿದ್ದಾರೆ. ಅದೇನೆ ಇರಲಿ ಬಾಳಿ ಬದುಕಬೇಕಾದ ಮಗ ಕಣ್ಣ ಮುಂದೆಯೇ ಸಾವನ್ನಪ್ಪಿರುವುದಕ್ಕೆ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ದೇವರು ಅವರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ..
ಇದನ್ನೂ ಓದಿ:ನೋಟ್ ಬ್ಯಾನ್ ಸಂದರ್ಭದಲ್ಲಿ ನೂರು ರೂಪಾಯಿಗಾಗಿ ಸಹೋದ್ಯೋಗಿಯ ಕೊಲೆ : ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್