ಶ್ರೀನಗರ, ಜಮ್ಮು ಕಾಶ್ಮೀರ:ಶ್ರೀನಗರದ ಪಂಥಾ ಚೌಕ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ ಆರಂಭವಾದ ಗುಂಡಿನ ಚಕಮಕಿ ಮುಂದುವರೆದಿದ್ದು, ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಮೂವರು ಪೊಲೀಸರು ಮತ್ತು ಓರ್ವ ಸಿಆರ್ಪಿಎಫ್ ಸಿಬ್ಬಂದಿ ಕೂಡಾ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾನೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಲಾಗಿದ್ದು, ಪಂಥಾ ಚೌಕ್‌ನ ಗೋಮಾಂದರ್ ಮೊಹಲ್ಲಾದಲ್ಲಿ ಉಗ್ರರು ಇರುವಿಕೆಯ ನಿಖರ ಮಾಹಿತಿ ಆಧರಿಸಿ, ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು.
ಈ ವೇಳೆ ಸ್ಥಳದಿಂದ ಪರಾರಿಉಯಾಗಲು ಉಗ್ರರು ಯತ್ನ ವಿಫಲವಾಗಿದ್ದು, ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಮುಂದಾದರು, ಈ ವೇಳೆ ಪೊಲೀಸರು ಮತ್ತು ಸಿಆರ್ಪಿಎಫ್ ಯೋಧ ಗಾಯಗೊಂಡಿದ್ದಾರೆ. ಭದ್ರತಾ ಪಡೆ ಪ್ರತಿದಾಳಿ ನಡೆಸಿ, ಮೂವರು ಉಗ್ರರನ್ನು ಬಲಿ ತೆಗೆದುಕೊಂಡಿದೆ. ಶೀಘ್ರದಲ್ಲೇ ಉಗ್ರರ ಗುರುತು ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ 6 ಜೈಷ್ ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ