ವಿಲ್ಲುಪುರಂ (ತಮಿಳುನಾಡು):ತಮಿಳುನಾಡಿನ ವಿಲ್ಲುಪುರಂ ಜಿಲ್ಲೆ ಸೇರಿದಂತೆ ವಿವಿಧೆಡೆ ನಕಲಿ ಮದ್ಯ ಸೇವಿಸಿ ಸಾವನ್ನಪ್ಪುತ್ತಿರುವವರ ಸಂಖ್ಯೆ ನಿಲ್ಲುತ್ತಿಲ್ಲ. ಮಂಗಳವಾರ ಮತ್ತಿಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ವಿಲ್ಲುಪುರಂ ಒಂದರಲ್ಲೇ ಮೂವರು ಮಹಿಳೆಯರು ಸೇರಿ 13 ಮಂದಿ ವಿಷಪೂರಿತ ಮದ್ಯಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಹೆಚ್‌ಆರ್‌ಸಿ) ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಜಿಲ್ಲೆಯ ಮರಕ್ಕನಂನ ಎಕ್ಕಿಯಾರ್ಕುಪ್ಪಂ ಮೀನುಗಾರಿಕಾ ಪ್ರದೇಶದಲ್ಲಿ ಶನಿವಾರ ಸಂಜೆ ಜನರ ಗುಂಪೊಂದು ಮದ್ಯ ಸೇವಿಸಿತ್ತು. ಕೆಲ ಗಂಟೆಗಳ ಬಳಿಕ ಒಟ್ಟು ಮಂದಿ ಸಾವನ್ನಪ್ಪಿದ್ದರು. ಮೃತರನ್ನು ಶಂಕರ್, ಸುರೇಶ್, ಧರಣಿವೇಲ್, ರಾಜಮೂರ್ತಿ, ವಿಜಯನ್, ಮನ್ನಕಟ್ಟಿ, ಮಲರ್ವಿಜ್ಲಿ, ಅಭಿರಾಗಂ, ಕೇಶವ ವೇಲು, ಶಂಕರ್, ವಿಜಯನ್, ರಾಜವೇಲು ಮತ್ತು ಶರತ್ ಕುಮಾರ್ ಎಂದು ಗುರುತಿಸಲಾಗಿದೆ.
ಮತ್ತೊಂದು ಘಟನೆ ಭಾನುವಾರ ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಗಮ್‌ನಿಂದ ವರದಿಯಾಗಿದ್ದು, ಅಕ್ರಮ ಮದ್ಯ ಸೇವನೆಯಿಂದ ಐವರು ಸಾವನ್ನಪ್ಪಿದ್ದರು. ಇದರಲ್ಲಿ ಚಿತ್ತಮೂರಿನ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ ಪ್ರಕರಣ ವರದಿಯಾಗಿತ್ತು. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಬಳಿಕ ರೋಗಲಕ್ಷಣವನ್ನು ತಪಾಸಣೆ ಮಾಡಿದಾಗ ನಕಲಿ ಮದ್ಯ ಸೇವನೆ ಮಾಡಿರುವುದು ಖಚಿತವಾಗಿತ್ತು. ಇದಲ್ಲದೇ, ಮದ್ಯ ಸೇವನೆ ಮಾಡಿದ ಮತ್ತಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಮೃತಪಟ್ಟವರ ಶವಪರೀಕ್ಷೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ತಮಿಳುನಾಡಿನಲ್ಲಿ ನಕಲಿ ಮದ್ಯ ಸೇವಿಸಿ 12 ಮಂದಿ ಸಾವು ಹಲವರು ಆಸ್ಪತ್ರೆಗೆ ದಾಖಲು
ಪೊಲೀಸರ ಪ್ರಕಾರ, ತಮಿಳುನಾಡಿನ ಉತ್ತರ ವಲಯದಲ್ಲಿ ವರದಿಯಾಗಿರುವ ನಕಲಿ ಮದ್ಯದ ಎರಡು ಪ್ರತ್ಯೇಕ ಘಟನೆಗಳ ನಡುವಿನ ಸಂಬಂಧದ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲವಾಗಿದೆ.