ನವದೆಹಲಿ:ಅಮಾನತುಗೊಂಡಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (WFI) ಸಮಿತಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಸಲು ಯಾವುದೇ ಅಧಿಕಾರ ಹೊಂದಿಲ್ಲ. ಸಂಸ್ಥೆ ನಡೆಸುವ ಯಾವುದೇ ಕಾರ್ಯಕ್ರಮವನ್ನು "ಅನುಮೋದಿತವಲ್ಲದ" ಮತ್ತು "ಮಾನ್ಯತೆ ಪಡೆಯದ" ಎಂದು ಪರಿಗಣಿಸುವುದಾಗಿ ಕ್ರೀಡಾ ಸಚಿವಾಲಯ ಭಾನುವಾರ ಹೇಳಿದೆ.
ಕಳೆದ ತಿಂಗಳು ಕುಸ್ತಿ ಫೆಡರೇಶನ್ ಆಫ್ ಇಂಡಿಯಾಗೆ ಚುನಾವಣೆ ನಡೆದಿತ್ತು. ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಮೂರು ದಿನಗಳ ಬಳಿಕ ಫೆಡರೇಶನ್ ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ ಕ್ರೀಡಾ ಸಚಿವಾಲಯ ಕುಸ್ತಿ ಫೆಡರೇಶನ್ ಸಮಿತಿಯನ್ನು ಅಮಾನತುಗೊಳಿಸಿತ್ತು. ನಂತರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಫೆಡರೇಶನ್‌ನ ದಿನನಿತ್ಯದ ವ್ಯವಹಾರಗಳಿಗಾಗಿ ಮೂವರು ಸದಸ್ಯರ ತಾತ್ಕಾಲಿಕ ಸಮಿತಿ ರಚಿಸಿತ್ತು.
ಆದಾಗ್ಯೂ, ಅಮಾನತುಗೊಂಡ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಸಂಜಯ್ ಸಿಂಗ್ ಶೀಘ್ರದಲ್ಲೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಸಂಜಯ್ ಸಿಂಗ್ ಅವರಿಗೆ ಪತ್ರ ಬರೆದಿರುವ ಕ್ರೀಡಾ ಸಚಿವಾಲಯ, "ಪುಣೆಯಲ್ಲಿ ಇದೇ ತಿಂಗಳ ಕೊನೆಯಲ್ಲಿ ಸೀನಿಯರ್ ನ್ಯಾಶನಲ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್ 2023 ನಡೆಸುವ ಬಗ್ಗೆ ನೀವು 06.01.2024ರ ಲೆಟರ್‌ಹೆಡ್‌ನಲ್ಲಿ ಸುತ್ತೋಲೆ ಹೊರಡಿಸಿರುವುದು ಸಚಿವಾಲಯದ ಗಮನಕ್ಕೆ ಬಂದಿದೆ. ಆದರೆ, 24.12.2023ರ ಕ್ರೀಡಾ ಸಚಿವಾಲಯದ ಆದೇಶದ ಪ್ರಕಾರ, ಅಂತಹ ಸುತ್ತೋಲೆಯನ್ನು ನೀಡಲು ಅಥವಾ ಭಾರತದ ಕುಸ್ತಿ ಫೆಡರೇಶನ್‌ನ ಲೆಟರ್‌ಹೆಡ್ ಬಳಸಲು ನಿಮಗೆ ಯಾವುದೇ ಅಧಿಕಾರವಿಲ್ಲ. ಭಾರತದ ವ್ರೆಸ್ಲಿಂಗ್ ಫೆಡರೇಶನ್‌ನ ಲೆಟರ್‌ಹೆಡ್ ಬಳಸುವುದನ್ನು ನೀವು ತಕ್ಷಣವೇ ನಿಲ್ಲಿಸಬೇಕು. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಹೆಸರು, ಲೋಗೋಗಳು ಮತ್ತು ಚಿಹ್ನೆಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದೆ. ಜತೆಗೆ, ಡಬ್ಲ್ಯುಎಫ್‌ಐನ ಅಮಾನತುಗೊಂಡಿರುವ ಕಾರ್ಯಕಾರಿ ಸಮಿತಿ ಸದಸ್ಯರು ಆಯೋಜಿಸುವ ಯಾವುದೇ ಚಾಂಪಿಯನ್‌ಶಿಪ್ ಅಥವಾ ಸ್ಪರ್ಧೆಗಳನ್ನು ಅನುಮೋದಿತವಲ್ಲದ ಮತ್ತು ಮಾನ್ಯತೆ ಪಡೆಯದ ಸ್ಪರ್ಧೆಗಳೆಂದೇ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.