ಜೈಪುರ(ರಾಜಸ್ಥಾನ): ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಮೂರು ದಶಕಗಳ ಅಧಿಕಾರ ಬದಲಾವಣೆಯ ವಾಡಿಕೆ ಮುಂದುವರೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಮರಳಿ ಕೇಸರಿ ಪಕ್ಷಕ್ಕೆ ಅಧಿಕಾರ ಹಸ್ತಾಂತರಿಸಲು ಸಜ್ಜಾಗಿದೆ. ಇದರ ನಡುವೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಚರ್ಚೆ ಶುರುವಾಗಿದೆ.
ರಾಜಸ್ಥಾನ ಸಿಎಂ ಗದ್ದುಗೆಗೆ ಹಲವು ಲೆಕ್ಕಾಚಾರ ನಡೆಯುತ್ತಿದೆ. ಅಲ್ವಾರ ಕ್ಷೇತ್ರದ ಸಂಸದ, ಆಧ್ಯಾತ್ಮಿಕ ನಾಯಕರೂ ಆಗಿರುವ ಮಹಂತ್ ಬಾಲಕನಾಥ್ ಅವರ ಹೆಸರು ಸಿಎಂ ಹುದ್ದೆಯ ರೇಸ್ನಲ್ಲಿ ಚಾಲ್ತಿಯಲ್ಲಿದೆ. ಇವರ ಜೊತೆಗೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಿಎಂ ಹುದ್ದೆಯ ಆಕಾಂಕ್ಷಿಗಳಾಗಿದ್ಧಾರೆ. ಈ ಹಿಂದೆ ಎರಡು ಬಾರಿ ಸಿಎಂ ಆಗಿ ಕಾರ್ಯ ನಿರ್ವಹಿಸಿರುವ ವಸುಂಧರಾ ರಾಜೆ ಮೂರನೇ ಬಾರಿಗೆ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ, ಕೇಂದ್ರ ಸಚಿವೆಯಾಗಿಯೂ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ಮತ್ತೊಂದೆಡೆ, ಶೇಖಾವತ್ ಅವರು 2014ರಿಂದ ಸಂಸದರಾಗಿದ್ದು, 2017ರಲ್ಲಿ ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ ಫಲಿತಾಂಶ: ಬಹುಮತದ ಗಡಿ ದಾಟಿದ ಬಿಜೆಪಿ... ಗೆಹ್ಲೋಟ್ಗೆ ಫಲ ನೀಡದ ಗ್ಯಾರಂಟಿ!
ರಾಜಸ್ಥಾನದ 200 ಕ್ಷೇತ್ರಗಳ ಪೈಕಿ 199 ಸ್ಥಾನಗಳ ಫಲಿತಾಂಶ ಹೊರಬರುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೇರಲು ಬೇಕಿರುವ ಮ್ಯಾಜಿಕ್ ಸಂಖ್ಯೆ 100. ಈಗಾಗಲೇ 114 ಸ್ಥಾನಗಳಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ, ಆಡಳಿತಾರೂಢ ಕಾಂಗ್ರೆಸ್ 70 ಸ್ಥಾನಗಳಿಗೆ ಕುಸಿದಿದೆ. ಬಿಎಸ್ಪಿ 2 ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದು, ಉಳಿದಂತೆ 13 ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ 40ಕ್ಕೂ ಹೆಚ್ಚು ಜನರು ಬಂಡಾಯವಾಗಿ ಸ್ಪರ್ಧಿಸಿದ್ದರು.