ಮುಂಬೈ, ಮಹಾರಾಷ್ಟ್ರ: ವಿಶ್ವಸಂಸ್ಥೆಯ ಸಮುದ್ರ ಕಾನೂನನ್ನು (UNCLOS-UN Convention on the Law of the Sea) ಕೆಲವು ಬೇಜವಾಬ್ದಾರಿ ರಾಷ್ಟ್ರಗಳು ಪಕ್ಷಪಾತ ಧೋರಣೆ ಹಾಗೂ ಆಕ್ರಮಣಕಾರಿ ಪ್ರವೃತ್ತಿ ತೋರುವ ಮೂಲಕ ತಪ್ಪಾಗಿ ಅರ್ಥೈಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಚೀನಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಜಲಾಂತರ್ಗಾಮಿ ವಿರೋಧಿ ನೌಕೆಯಾದ ಐಎನ್‌ಎಸ್ ವಿಶಾಖಪಟ್ಟಣಂ (INS Visakhapatnam) ಅನ್ನು ಭಾರತೀಯ ನೌಕಾಪಡೆಗೆ (Indian Navy) ಸೇರ್ಪಡೆಗೊಳಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಚೀನಾದ ವಿದೇಶಾಂಗ, ಸಾಗರೋತ್ತರ ನೀತಿಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಭಾರತವು ಕಡಲ ರಕ್ಷಣೆ ವಿಚಾರದಲ್ಲಿ ಜವಾಬ್ದಾರಿಯುತ ರಾಷ್ಟ್ರವಾಗಿದೆ. ಭಾರತ ಎಲ್ಲಾ ರಾಷ್ಟ್ರಗಳ ಏಕತೆಯನ್ನು ಆಧಾರವಾಗಿರಿಸಿಕೊಂಡ ತತ್ವಗಳನ್ನು ಬೆಂಬಲಿಸುತ್ತದೆ. ಯಾವಾಗಲೂ ಶಾಂತಿಯುತವಾದ ಮತ್ತು ಪರಸ್ಪರರ ನಿಯಮಗಳಿಗೆ ಬದ್ಧವಾದ ರಕ್ಷಣಾ ವ್ಯವಸ್ಥೆಯನ್ನು ಭಾರತ ಬಯಸುತ್ತದೆ. ಕೆಲವು ರಾಷ್ಟ್ರಗಳು ತಮಗೆ ಬೇಕಾದಂತೆ ಕಾನೂನುಗಳನ್ನು ತಿರುಚುತ್ತಿವೆ ಎಂದು ರಾಜನಾಥ ಸಿಂಗ್ ಹೇಳಿದ್ದಾರೆ.