ಕಾಸರಗೋಡು(ಕೇರಳ) :260 ಬಡವರಿಗೆ ಮನೆ ನಿರ್ಮಿಸಿಕೊಟ್ಟು ಜನಸೇವಕ ಎಂಬ ಬಿರುದು ಪಡೆದುಕೊಂಡಿದ್ದ ಸಾಯಿರಾಮ್ ಭಟ್(85) ನಿಧನರಾಗಿದ್ದಾರೆ. ಸರಳ ವ್ಯಕ್ತಿತ್ವದ ಇವರು, ಹತ್ತಾರು ಜನರಿಗೆ ಸ್ವಂತ ಹಣದಿಂದಲೇ ಆಟೋರಿಕ್ಷಾ ಹಾಗೂ ಹೊಲಿಗೆ ಯಂತ್ರ ಖರೀದಿಸಿ ಕೊಟ್ಟಿದ್ದರು.
ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದಲ್ಲಿ 1937ರ ಜುಲೈ 17ರಂದು ಜನಸಿದ್ದ ಸಾಯಿರಾಮ್ ಭಟ್, ಜನಸಾಮಾನ್ಯರಲ್ಲಿ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದರು. ಬಡ ಕುಟುಂಬಗಳಿಗೆ ಮನೆ, ಉದ್ಯೋಗಕ್ಕಾಗಿ ಸಹಾಯ ಮಾಡುತ್ತಿದ್ದರು. ನೂರಾರು ಕಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಿರುವ ಇವರು ಶ್ರೀ ಸತ್ಯ ಸಾಯಿಬಾಬಾ ಅವರ ಅಪ್ರತಿಮ ಭಕ್ತರಾಗಿದ್ದರು.
ಸಮಾಜದ ಉನ್ನತಿಗಾಗಿ ವೈಯಕ್ತಿಕವಾಗಿ ನಿಸ್ವಾರ್ಥ ಸೇವೆ ಮಾಡಿರುವ ಸಾಯಿ ರಾಮ್ ಭಟ್, ಕಳೆದ 25 ವರ್ಷಗಳ ಹಿಂದೆ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿದ್ದರು. ತಾವು ಉಳಿಸಿರುವ ಹಣದಿಂದಲೇ ಇಷ್ಟೊಂದು ಸೇವಾ ಕಾರ್ಯ ಮಾಡುವ ಮೂಲಕ ಕೇರಳ, ಕರ್ನಾಟಕ ಸರ್ಕಾರದ ಸಚಿವರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರು ನಿರ್ಮಿಸಿರುವ ಅನೇಕ ಮನೆಗಳ ಉದ್ಘಾಟನೆಗೆ ಸಚಿವರು, ಸಂಸದರು ಆಗಮಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.