ನವದೆಹಲಿ: ತನ್ನ ತಂಗಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಇಲ್ಲಿನ ಪಟೇಲ್ ನಗರದ ನಿವಾಸಿ ಮನೋಜ್ ಕುಮಾರ್ ನೇಗಿ ಎಂಬಾತನೇ ಹತ್ಯೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈ ಕೊಲೆ ಮಾಡಿದ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಲಾಗಿದೆ.
ಕೆಲ ದಿನಗಳ ಹಿಂದೆ ಇಬ್ಬರು ಹುಡುಗರು ಮನೋಜ್ ಕುಮಾರ್ ನೇಗಿ ಅವರ ಸಹೋದರಿಗೆ ಕಿರುಕುಳ ನೀಡಿದ್ದರು. ಇದನ್ನು ಮನೋಜ್ ಪ್ರಶ್ನಿಸಿದ್ದ. ಅಲ್ಲದೇ, ಆರೋಪಿಗಳಿಗೆ ಕಪಾಳಮೋಕ್ಷ ಮಾಡಿದ್ದ ಎನ್ನಲಾಗಿದೆ. ಇದರಿಂದ ಮನೋಜ್ ಮೇಲೆ ದ್ವೇಷ ಹೊಂದಿದ್ದ ಹುಡುಗರು, ಈ ಸೇಡು ತೀರಿಸಿಕೊಳ್ಳಲೆಂದು ಶುಕ್ರವಾರ ರಾತ್ರಿ ಮನೋಜ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ.
ವಿದ್ಯಾರ್ಥಿ ಮನೋಜ್ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕಂಪ್ಯೂಟರ್ ತರಗತಿ ಮುಗಿಸಿ ತನ್ನ ಮನೆಗೆ ಹೋಗುತ್ತಿದ್ದ. ಈ ವೇಳೆ ದಾರಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಆತನನ್ನು ಸುತ್ತುವರಿದು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮನೋಜ್ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಸಂಬಂಧ ಹತ್ಯೆಯಾದ ಮನೋಜ್ ತಂದೆ ಚಂದನ್ ಸಿಂಗ್ ನೇಗಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳಾದ ಅಪ್ರಾಪ್ತ ಬಾಲಕರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಬಾಲಕಿಗೆ ಅಶ್ಲೀಲ ಚಿತ್ರಗಳ ಮೆಮೊರಿ ಕಾರ್ಡ್ ನೀಡಿದ ಆರೋಪ: ಕಲ್ಲಡ್ಕ ನಿವಾಸಿ ಬಂಧನ